ನಿರ್ಭಯಾಗೆ ನ್ಯಾಯ ಕೊಡಿಸಲು ಬೀದಿಗಿಳಿದ ಕಾಲವಿತ್ತು – ಈಗ ಯಾರಿಗಾಗಿ ಬೀದಿಗಿಳಿದಿದ್ದೀರಿ?- ಮಲಿವಾಲ್‌ ಕಿಡಿ

– ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ ಬಂಧನ – ಬಿಜೆಪಿ ಪ್ರಧಾನ ಕಚೇರಿ ಎದುರು ಪ್ರತಿಭಟನೆಗೆ ಆಪ್‌ ಸಜ್ಜು

ನವದೆಹಲಿ: ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ (Swati Maliwal) ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ ಬಂಧನ (Bibhav Kumar Arrest) ಖಂಡಿಸಿ ಆಪ್‌ ಬೃಹತ್‌ ಪ್ರತಿಭಟನೆಗೆ ಸಜ್ಜಾಗಿದೆ.

ದೆಹಲಿ ಸಿಎಂ & ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಸುತ್ತಲೂ ಬಿಗಿ ಭದ್ರೆತೆಯನ್ನು ನಿಯೋಜಿಸಲಾಗಿದೆ. ದೆಹಲಿಯ ಟಾಪ್‌ ಅಧಿಕಾರಿಗಳ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಹಾಗೂ ವಿವಿಧ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಈ ನಡುವೆ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ವಾತಿ ಮಲಿವಾಲ್‌, ಆಪ್‌ ಪ್ರತಿಭಟನೆಗೆ (AAP Protest) ವಿರೋಧ ವ್ಯಕ್ತಪಡಿಸಿದ್ದಾರೆ. ನಿರ್ಭಯಾಗೆ ನ್ಯಾಯ ಕೊಡಿಸಲು ನಾವೆಲ್ಲ ಬೀದಿಗಿಳಿದ ಕಾಲವೊಂದಿತ್ತು. ಆದರಿಂದು 12 ವರ್ಷಗಳ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಕಣ್ಮರೆಯಾಗುವಂತೆ ಮಾಡಿ ಫೋನ್ ಫಾರ್ಮಾಟ್ ಮಾಡಿದ ಆರೋಪಿಗಳನ್ನು ಉಳಿಸಲು ಬೀದಿಗಿಳಿದಿದ್ದೇವೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಸಚಿವ ಮನಿಷ್‌ ಸಿಸೋಡಿಯಾ ಪರ ಮಾತನಾಡಿರುವ ಮಲಿವಾಲ್‌, ಮನೀಶ್ ಸಿಸೋಡಿಯಾಜಿ (Manish Sisodia) ಅವರಿಗಾಗಿ ಇಷ್ಟು ಬಲಪ್ರಯೋಗ ಮಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದೆ. ಅವರು ಇಲ್ಲಿ ಇದ್ದಿದ್ದರೆ ಬಹುಶಃ ನನ್ನ ಮೇಲೆ ಹಲ್ಲೆ ನಡೆಯುತ್ತಿರಲಿಲ್ಲ ಎಂದು ಭಾವುಕರಾಗಿದ್ದಾರೆ.

ನಿನ್ನೆಯಷ್ಟೇ ಬಂಧನ:
ಸ್ವಾತಿ ಮಲಿವಲ್‌ ಮೇಲೆ ದೌರ್ಜನ್ಯ ಎಸಗಿದ ದೆಹಲಿ ಸಿಎಂ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅವರನ್ನು ಪೊಲೀಸರು ಶನಿವಾರವಷ್ಟೇ ಬಂಧಿಸಿದ್ದರು. ಇದೇ ಮೇ 13 ರಂದು ಸಿಎಂ ನಿವಾಸದಲ್ಲಿ ತನ್ನ ಮೇಲೆ ಬಿಭವ್‌ ಕುಮಾರ್‌ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್‌ ದೂರು ನೀಡಿದ್ದರು. ಸ್ವಾತಿ ಮಲಿವಾಲ್‌ ದೂರಿನ ಬೆನ್ನಲ್ಲೇ ವಿಧಿವಿಜ್ಞಾನ ತಜ್ಞರು, ಪೊಲೀಸರ ತಂಡ ಶುಕ್ರವಾರ ಸಂಜೆ ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತ್ತು. ತನಿಖೆಯ ಭಾಗವಾಗಿ ವಿಡಿಯೋ ಸೆರೆ ಹಿಡಿದ ನಂತರ ಶನಿವಾರ ನಸುಕಿನ ಜಾವ 2:15ಕ್ಕೆ ತಂಡ ಸಿಎಂ ನಿವಾಸದಿಂದ ಹೊರಬಂದಿತ್ತು.

ಎಲ್ಲರನ್ನೂ ಜೈಲಿಗೆ ಹಾಕಿ:
ಆಪ್ತನ ಬಂಧನದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಅರವಿಂದ್‌ ಕೇಜ್ರಿವಾಲ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಾಯಕರು ಆಪ್ ಪಕ್ಷದ ಹಿಂದೆ ಬಿದ್ದಿದ್ದಾರೆ. ಒಬ್ಬರಾದ ಬಳಿಕ ಒಬ್ಬರಂತೆ ನಮ್ಮ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಮನೀಶ್ ಸಿಸೋಡಿಯ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಮತ್ತು ನನ್ನನ್ನು ಜೈಲಿಗೆ ಹಾಕಲಾಯಿತು. ಈಗ ನನ್ನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ. ನಾವು ಸಹ ಬಿಜೆಪಿ ಕಚೇರಿಗೆ ಬರಲಿದ್ದೇವೆ. ಯಾರ‍್ಯಾರನ್ನು ಜೈಲಿಗೆ ಹಾಕಬೇಕು ಒಟ್ಟಿಗೆ ಹಾಕಿ. ಹೀಗೆ ಜೈಲಿಗೆ ಹಾಕಿ ಆಪ್ ಪಕ್ಷವನ್ನು ನಾಶ ಮಾಡಬೇಕು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಆಪ್ ಪಕ್ಷ ಒಂದೇ ಚಿಂತನೆಯಾಗಿದೆ. ಇದನ್ನು ನಾಶ ಮಾಡಲು ಪ್ರಯತ್ನಿಸಿದಷ್ಟು ಈ ಚಿಂತನೆ ದೇಶದಲ್ಲಿ ಹೆಚ್ಚಲಿದೆ ಎಂದು ಬಿಜೆಪಿಗೆ ಸವಾಲು ಹಾಕಿದ್ದರು.