ತುಂಬಿದ ಉಡುಪಿಯ ಸ್ವರ್ಣ ನದಿ – ನಗರಕ್ಕೆ 24 ಗಂಟೆ ವಾಟರ್ ಸಪ್ಲೈ

ಉಡುಪಿ: ಜೂನ್ ತಿಂಗಳಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆಯಾದರೂ ಉಡುಪಿಯ ಸ್ವರ್ಣ ನದಿ ತುಂಬಿಕೊಂಡಿದೆ.

ಮೇ ತಿಂಗಳಲ್ಲಿ ಉಡುಪಿ ನಗರವಾಸಿಗಳ ಕುಡಿಯುವ ನೀರಿನ ಆಸರೆಯಾಗಿದ್ದ ಸ್ವರ್ಣ ನದಿ ಸಂಪೂರ್ಣ ಬತ್ತಿತ್ತು. ಈ ಹಿನ್ನೆಲೆಯಲ್ಲಿ 10 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿತ್ತು. ಅಲ್ಲದೆ ಟ್ಯಾಂಕರ್ ಮೂಲಕ ಜನರಿಗೆ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದೀಗ ಮುಂಗಾರು ದುರ್ಬಲವಾದರೂ ಸ್ವರ್ಣ ನದಿ ತುಂಬಿಕೊಂಡಿದೆ.

ಡ್ಯಾಂ ಕಡೆ ನಿರಂತರ ಹರಿವು ಇರುವುದರಿಂದ ನಗರಕ್ಕೆ 24 ಗಂಟೆ ನೀರು ಕೊಡಲು ನಗರಸಭೆ ನಿರ್ಧರಿಸಿದೆ. ಕಾರ್ಕಳ ತಾಲೂಕು ಮತ್ತು ಹೆಬ್ರಿ ತಾಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿರುವುದರಿಂದ ಸ್ವರ್ಣ ನದಿಗೆ ಎಲ್ಲಾ ಭಾಗದಿಂದ ನೀರು ಹರಿದುಬರುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಅರ್ಧದಷ್ಟೂ ಮಳೆ ಬಿದ್ದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ಉಡುಪಿನಲ್ಲಿ ಭಾಗೀರಥಿ ಜಯಂತಿ ದಿನದಂದು ಮಠದಲ್ಲಿ ಗಂಗಾರತಿ ಆಗುತ್ತಿದ್ದಂತೆ ಪವಾಡ ಎಂಬಂತೆ ಧೋ ಎಂದು ಮಳೆ ಸುರಿದಿತ್ತು. ಭಾಗೀರಥಿ ಜಯಂತಿ ಹಿನ್ನೆಲೆಯಲ್ಲಿ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಗಂಗೆಗೆ ಆರತಿಯೆತ್ತಿ, ವಿಶೇಷ ಪೂಜೆ ಸಲ್ಲಿಸಿದ್ದರು. ಬರ ನೀಗಿ- ವರ್ಷಧಾರೆಯಾಗಿ ರೈತರರು ಬೆಳೆದ ಬೆಳೆಗಳು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದ್ದರು. ಅಷ್ಟಾಗುತ್ತಲೇ ಉಡುಪಿಯಲ್ಲಿ ಧೋ ಅಂತ ಮಳೆ ಸುರಿದಿತ್ತು.

Comments

Leave a Reply

Your email address will not be published. Required fields are marked *