ಅಂತರ್ಜಲ ಮಾಲಿನ್ಯ ಕಡಿಮೆಗೊಳಿಸಿದ ಸ್ವಚ್ಛತಾ ಅಭಿಯಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದಿಂದ ಭಾರತದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ ಎಂದು ಯುನಿಸೆಫ್ ಅಧ್ಯಯನ ಮಾಡಿ ವರದಿ ನೀಡಿದೆ.

ಹೌದು, ಅಕ್ಟೋಬರ್ 2, 2014ರ ಗಾಂಧಿ ಜಯಂತಿಯಂದು ಮೋದಿ ಸರ್ಕಾರ ಆರಂಭಿಸಿದ `ಸ್ವಚ್ಛ ಭಾರತ್ ಅಭಿಯಾನ’ಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಯುನಿಸೆಫ್ ಮತ್ತು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಜಂಟಿಯಾಗಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಅಧ್ಯಯನ ನಡೆಸಿದೆ. ಈ ರಾಜ್ಯಗಳಲ್ಲಿ ಸಂಗ್ರಹಿಸಿದ ಅಂತರ್ಜಲ ಮಾದರಿಗಳ ಮೇಲೆ ಅಧ್ಯಯನ ನಡೆಸಿರುವ ಯುನಿಸೆಫ್ ಈ ವರದಿ ನೀಡಿದೆ. ಶೌಚಕ್ಕಾಗಿ ಬಯಲುಗಳನ್ನು ಆಧರಿಸಿರುವ ಗ್ರಾಮಗಳಿಗೆ ಹೋಲಿಸಿದರೆ ಬಯಲು ಶೌಚ ಮುಕ್ತ ಗ್ರಾಮಗಳಲ್ಲಿ 11.25 ಪಟ್ಟು ಹೆಚ್ಚು ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ. ಹೀಗಾಗಿ ಸ್ವಚ್ಛ ಭಾರತದ ಅಭಿಯಾನದಿಂದ ದೇಶದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗುತ್ತಿದೆ ಎಂದು ಯುನಿಸೆಫ್ ತಿಳಿಸಿದೆ.

ಸ್ವಚ್ಛತಾ ಅಭಿಯಾನದ ಭಾಗವಾಗಿ ಬಯಲು ಶೌಚಮುಕ್ತ ರಾಷ್ಟ್ರದ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಹಲವು ಗ್ರಾಮಗಳಲ್ಲಿ ಸರ್ಕಾರ ಶೌಚಾಲಯ ನಿರ್ಮಿಸಿ ಅದರ ಬಗ್ಗೆ ಜಾಗೃತಿ ಮೂಡಿಸಿದೆ.

ಅಧ್ಯಯನ ಪ್ರಕಾರ, ಮಾದರಿಗಳನ್ನು ಸಂಗ್ರಹಿಸಿದ ಗ್ರಾಮೀಣ ಪ್ರದೇಶಗಳಲ್ಲಿ ಮೊದಲು ಬಯಲು ಶೌಚ ಸಾಮಾನ್ಯವಾಗಿತ್ತು. ಆದರೆ ಸ್ವಚ್ಛ ಭಾರತ ಅಭಿಯಾನದ ನಂತರ ಈ ಗ್ರಾಮೀಣ ಪ್ರದೇಶಗಳು ಬಯಲು ಶೌಚ ಮುಕ್ತ ಪ್ರದೇಶವಾಗಿರುವುದನ್ನು ಯುನಿಸೆಫ್ ವರದಿಯಲ್ಲಿ ಉಲ್ಲೇಖಿಸಿದೆ.

ಕೇಂದ್ರದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವರದಿ ಬಗ್ಗೆ ಪ್ರತಿಕ್ರಿಯಿಸಿ, ಸ್ವಚ್ಛತೆ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಬಯಲು ಶೌಚ ಮುಕ್ತ ಪ್ರದೇಶಗಳು ತನ್ನಿಂದ ತಾನೇ ರೋಗ ಮುಕ್ತ ಪ್ರದೇಶಗಳಾಗುತ್ತವೆ. 2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‍ಓ) ಅಧ್ಯಯನವು, ಭಾರತ ಬಯಲು ಶೌಚ ಮುಕ್ತವಾದರೆ ಸುಮಾರು 3 ಲಕ್ಷ ಮಂದಿಯ ಜೀವಗಳು ಉಳಿಯಬಹುದೆಂದು ತಿಳಿಸಿತ್ತು ಎಂದು ಹೇಳಿದರು.

Comments

Leave a Reply

Your email address will not be published. Required fields are marked *