ಪಾಂಡ್ಯ, ಕೆಎಲ್ ರಾಹುಲ್ ವಿರುದ್ಧದ ಅಮಾನತು ರದ್ದುಗೊಳಿಸಿದ ಸಿಓಎ

ಮುಂಬೈ: ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ವಿರುದ್ಧದ ಅಮಾನತು ಆದೇಶ ರದ್ದು ಮಾಡುವಂತೆ ಬಿಸಿಸಿಐ ಆಡಳಿತ ಸಮಿತಿ (ಸಿಓಎ) ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ನೇಮಿಸಿರುವ ಬಿಸಿಸಿಐ ಆಡಳಿತ ಮಂಡಳಿ ಪ್ರಕರಣದ ತಟಸ್ಥ ಸಲಹೆಗಾರ (ಅಮಿಕಸ್ ಕ್ಯೂರಿ) ಪಿಎಸ್ ನರಸಿಂಹ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಗುರುವಾರ ಅಮಾನತು ರದ್ದುಗೊಳಿಸಿದ್ದು, ನಿಷೇಧ ವಿಧಿಸಿದ 2 ವಾರಗಳ ಬಳಿಕ ಈ ತೀರ್ಮಾನವನ್ನು ಕೈಗೊಂಡಿದೆ.

ಅಮಾನತು ಆದೇಶ ತೆರವುಗೊಳಿಸಿರುವುದರಿಂದ ಪಾಂಡ್ಯ, ನ್ಯೂಜಿಲೆಂಡ್ ಸರಣಿಗೆ ತೆರಳುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ದೇಶಿಯ ಕ್ರಿಕೆಟ್ ಅಥವಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೀಂ ಇಂಡಿಯಾ ಎ ತಂಡದಲ್ಲಿ ಆಡುವ ಅವಕಾಶವಿದೆ. ಈ ಕುರಿತು ಸಿಒಎ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಸಾರ್ವಜನಿಕ ತನಿಖಾ ಅಧಿಕಾರಿ (Ombudsman)ಯನ್ನು ನೇಮಕ ಮಾಡಿದೆ ಎಂದು ವಿವರಿಸಿದೆ.

ಬಿಸಿಸಿಐ ಸಿಒಎ ಸಮಿತಿಯ ಸದಸ್ಯರಾಗಿರುವ ಡಯಾನಾ ಎಡುಲ್ಜಿ ಅವರು ಪಾಂಡ್ಯ ಹಾಗೂ ಕೆಎಲ್ ರಾಹುಲ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು  ಕಾನೂನು ಸಮಿತಿಗೆ ಸಲಹೆ ನೀಡಿದ್ದರು. ಆದರೆ ಸಮಿತಿಯ ಮುಖ್ಯಸ್ಥರಾದ ವಿನೋದ್ ರಾಯ್ ಈ ಸಲಹೆಯನ್ನು ತಿರಸ್ಕರಿಸಿದ್ದರು.

ಹಾರ್ದಿಕ್ ಪಾಂಡ್ಯ ಹಾಗು ಕೆಎಲ್ ರಾಹುಲ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು, ಸೆಕ್ಸ್ ಮೇಲೆ ಆಕ್ಷೇಪಾರ್ಹ ಕಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು. ಈ ಕುರಿತು ಸಾರ್ವಜನಿಕ ವಲಯದಿಂದ ಕೇಳಿ ಬಂದ ಟೀಕೆಗಳ ಹಿನ್ನೆಲೆಯಲ್ಲಿ ಬಿಸಿಸಿಐ ಸಮಿತಿ ಇಬ್ಬರು ಆಟಗಾರರ ಮೇಲೆ ನಿಷೇಧ ವಿಧಿಸಿತ್ತು. ಪರಿಣಾಮ ಇಬ್ಬರು ಆಟಗಾರರು ಆಸ್ಟ್ರೇಲಿಯಾ ಸರಣಿಯಿಂದ ಹಿಂದಿರುಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *