ಬುಧವಾರ ಬೆಳಗ್ಗೆ ಬನ್ನಿ, ನಿಮಗೆ 1 ರೂ. ನೀಡಬೇಕಿದೆ ಎಂದಿದ್ರು ಸುಷ್ಮಾ: ಸಾಳ್ವೆ ಸಂತಾಪ

ನವದೆಹಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಸಮರ್ಥವಾದ ವಾದ ಮಂಡನೆ ಮಾಡಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಗೆಲುವು ಪಡೆದಿದ್ದ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರು ಸುಷ್ಮಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ್ದ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡಿರುವ ಹರೀಶ್ ಸಾಳ್ವೆ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಸುಷ್ಮಾ ಅವರು ನನಗೆ ಬುಧವಾರ ಬೆಳಗ್ಗೆ ಬರುವಂತೆ ಹೇಳಿದ್ದರು. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಗೆಲುವು ಪಡೆದಿದ್ದೀರಿ. ನಿಮ್ಮನ್ನು ಭೇಟಿ ಮಾಡಬೇಕಿದೆ. ನಿಮಗೆ ನೀಡಬೇಕಿದ್ದ ಶುಲ್ಕ 1 ರೂ. ಬಾಕಿ ಇದೆ ಎಂದು ಹೇಳಿದ್ದರು. ಆದರೆ ಈಗ ಅವರೇ ಇಲ್ಲ ಎಂದು ಭಾವುಕರಾಗಿದ್ದಾರೆ.

ಸುಷ್ಮಾ ಅವರೊಂದಿಗೆ ಮಾತನಾಡಿದ್ದ ಆತ್ಮೀಯ ಕ್ಷಣಗಳನ್ನು ಸಾಳ್ವೆ ಅವರು ನೆನಪಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ 8.30ರ ಸಮಯದಲ್ಲಿ ಸಾಳ್ವೆ ಅವರು ಸುಷ್ಮಾ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಬುಧವಾರ ಬೆಳಗ್ಗೆ 6 ಗಂಟೆಗೆ ಬನ್ನಿ ಎಂದು ಸುಷ್ಮಾ ಅವರು ಸಾಳ್ವೆ ಅವರಿಗೆ ಆಹ್ವಾನ ನೀಡಿದ್ದರು.

ಅಂತರಾಷ್ಟ್ರೀಯ ನ್ಯಾಯಾಲಯ ವಿಯೆನ್ನಾದಲ್ಲಿ ಜಾಧವ್ ಪ್ರಕರಣದಲ್ಲಿ ಭಾರತದ ಪರ ವಾದ ಸಾಳ್ವೆ ಅವರು ವಾದ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕರೆ ಮಾಡಿದ್ದ ಸುಷ್ಮಾ ಸ್ವರಾಜ್ ಅವರು ಅಭಿನಂದನೆ ಸಲ್ಲಿಸಿದ್ದರು. ಅಲ್ಲದೇ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದರು ಎಂದು ಸಾಳ್ವೆ ಅವರು ನೆನಪಿಸಿಕೊಂಡಿದ್ದಾರೆ.

ಜಾಧವ್ ಪ್ರಕರಣವನ್ನು ವಿಶ್ವಸಂಸ್ಥೆಯ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‍ನಲ್ಲಿ ಭಾರತ ಪರ ಸಾಳ್ವೆ ಅವರು ವಾದ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ಸರ್ಕಾರದಿಂದ ಕೇವಲ 1 ರೂ. ಸಂಭಾವನೆ ಪಡೆದಿದ್ದರು. ಈ ಬಗ್ಗೆ ವ್ಯಕ್ತಿಯೊಬ್ಬರ ಟ್ವಿಟ್ಟಿಗೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಅವರು, ಹರೀಶ್ ಸಾಳ್ವೆ ಅವರು ನಮ್ಮಿಂದ ಕೇವಲ 1 ರೂ. ಸಂಭಾವನೆ ಪಡೆಯುತ್ತಿದ್ದಾರೆ ಅಷ್ಟೇ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *