3 ವರ್ಷದ ಪಾಕ್ ಬಾಲಕಿಗೆ ವೈದ್ಯಕೀಯ ವೀಸಾ ನೀಡಿದ ಸುಷ್ಮಾ ಸ್ವರಾಜ್

ನವದೆಹಲಿ: ಪಾಕಿಸ್ತಾನದ ವ್ಯಕ್ತಿಯೊಬ್ಬರ ಲಿವರ್ ಕಸಿ ಹಾಗೂ 3 ವರ್ಷದ ಬಾಲಕಿಯ ಹೃದಯ ಶಸ್ತ್ರಚಿಕಿತ್ಸೆಗಾಗಿ ಭಾರತ ವೈದ್ಯಕೀಯ ವೀಸಾ ಮಂಜೂರು ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಲಾಹೋರ್ ಮೂಲದ ಉಜೇರ್ ಹುಮಾಯುನ್ ಎಂಬವರ ಮನವಿಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್, ಅವರ 3 ವರ್ಷದ ಮಗಳ ಓಪನ್ ಹಾರ್ಟ್ ಸರ್ಜರಿಗಾಗಿ ಮೆಡಿಕಲ್ ವೀಸಾ ನೀಡುವುದಾಗಿ ಹೇಳಿದ್ದಾರೆ.

ನನ್ನ ಮೂರು ವರ್ಷದ ಮಗಳಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇದೆ. ಅವಳಿಗೆ ಭಾರತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಆದ್ದರಿಂದ ವೈದ್ಯಕೀಯ ವೀಸಾ ಕೊಡಿಸಿ ಎಂದು ಸುಷ್ಮಾ ಸ್ವರಾಜ್ ಗೆ ಉಜೇರ್ ಹುಮಾಯುನ್ ಟ್ವೀಟ್ ಮಾಡಿದ್ದರು.

ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ನಿಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ನಾವು ವೀಸಾ ನೀಡುತ್ತಿದ್ದೇವೆ. ಆಕೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ನೂರ್ಮಾ ಹಬೀಬ್ ಎಂಬ ಮತ್ತೋರ್ವ ಪಾಕಿಸ್ತಾನದ ಮಹಿಳೆ ತಮ್ಮ ತಂದೆಗೆ ಲಿವರ್ ಕಸಿಯ ಅಗತ್ಯವಿದ್ದು, ಅದಕ್ಕಾಗಿ ವೀಸಾ ಕೊಡಿಸಲು ಸಹಾಯ ಕೇಳಿ ಟ್ವೀಟ್ ಮಾಡಿದ್ದರು.ಸುಷ್ಮಾ ಸ್ವರಾಜ್ ಅವರು ಇದಕ್ಕೆ ಸ್ಪಂದಿಸಿ, ಭಾರತದಲ್ಲಿ ನಿಮ್ಮ ತಂದೆಯ ಹೃದಯ ಕಸಿಗಾಗಿ ವೀಸಾ ನೀಡುತ್ತಿದ್ದೇವೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಅವರು ದೀರ್ಘ ಕಾಲ ಬದುಕಲಿ ಎಂದು ಆಶಿಸುತ್ತೇವೆ ಎಂದು ಮರು ಟ್ವೀಟ್ ಮಾಡಿದ್ದಾರೆ.

ಎರಡು ರಾಷ್ಟ್ರಗಳ ನಡುವೆ ಹಲವಾರು ಸಮಸ್ಯೆಗಳ ಮಧ್ಯೆಯೂ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಿ ಪ್ರಜೆಗಳ ವೈದ್ಯಕೀಯ ವೀಸಾ ಅರ್ಜಿಗಳನ್ನ ಪರಿಗಣಿಸಿ ಮಾನವೀಯತೆ ದೃಷ್ಠಿಯಿಂದ ಸಹಾಯ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *