ಕೋಟ್ಯಾಧಿಪತಿಗಿಂತ ಎಳ್ಳಷ್ಟು ಕಡಿಮೆಯಿಲ್ಲ ಈ ಕ್ವಿಜ್

– ವಿದ್ಯಾರ್ಥಿಗಳ ಪ್ರತಿಭೆಗೆ ಶಿಕ್ಷಣ ಸಚಿವರು ಫಿದಾ

ಚಾಮರಾಜನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಜಿಲ್ಲಾ ಪ್ರವಾಸದ ಸಮಯದಲ್ಲಿ ತೆರಕಣಾಂಬಿಯ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಶಾಲೆಯಲ್ಲಿ ಪರೀಕ್ಷಾಧಾರಿತ ಕ್ವಿಜ್ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಭಾಗವಹಿಸಿದ್ದ ಮಕ್ಕಳ ಚುರುಕುತನ ನೋಡಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಮಾರು 8 ತಂಡಗಳಲ್ಲಿ ಶಾಲೆಯ ಎಲ್ಲಾ ಮಕ್ಕಳನ್ನು ವಿಂಗಡಿಸಲಾಗಿತ್ತು. ಪಂಪ, ರನ್ನ, ಜನ್ನ, ಹರಿಹರ, ಕುಮಾರವ್ಯಾಸ ಈ ರೀತಿ ಪ್ರೇರಣಾದಾಯಿ ಹೆಸರುಗಳನ್ನು ಈ ತಂಡಗಳಿಗೆ ಇಡಲಾಗಿತ್ತು. ಗಣಿತ, ವಿಜ್ಞಾನ, ಹಿಂದಿ ಹೀಗೆ ಎಲ್ಲಾ ವಿಷಯಗಳ ಮೇಲೂ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕ್ವಿಜ್ ರೀತಿ ಕೇಳಲಾಗಿತ್ತು.

ಮಕ್ಕಳು ಉತ್ತರ ನೀಡುವಾಗ ಅತ್ಯಂತ ಕಾತುರತೆ, ಲವಲವಿಕೆ ಕಾಣಿಸಿತು. ಶಿಕ್ಷಕರು ಬಹಳ ಉತ್ಸಾಹದಿಂದ ಈ ಕಾರ್ಯಕ್ರಮ ನಡೆಸುತ್ತಿದ್ದರು. ಇದನ್ನು ನೋಡಿದ ಸುರೇಶ್ ಕುಮಾರ್ ಅವರು ಟಿವಿಯಲ್ಲಿ ಬರುವ ಯಾವುದೇ ಕೋಟ್ಯಾಧಿಪತಿ ಕಾರ್ಯಕ್ರಮಕ್ಕಿಂತ ಎಳ್ಳಷ್ಟೂ ಕಡಿಮೆಯಿರಲಿಲ್ಲ ಈ ಕಾರ್ಯಕ್ರಮ ಎಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡು ಮಕ್ಕಳ ಪ್ರತಿಭೆಯನ್ನು ಹೊಗಳಿದ್ದಾರೆ.

ಅಷ್ಟೇ ಅಲ್ಲದೆ ಶಿಕ್ಷಕರು ಶಾಲೆಯ ಪ್ರತಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಮನೆಗೆ ದಿನ ಬಿಟ್ಟು ದಿನ ಭೇಟಿ ಕೊಟ್ಟು, ಮನೆಯವರೊಂದಿಗೆ ಆತ್ಮೀಯವಾಗಿ ವಿದ್ಯಾರ್ಥಿಯ ಯೋಗಕ್ಷೇಮ, ಓದಿನ ಪ್ರಗತಿ ಇತ್ಯಾದಿ ಕುರಿತು ಚರ್ಚಿಸಿ ದಾಖಲಿಸುವ ಉತ್ತಮ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಪ್ರಶ್ನೆ ಕೇಳಿದ ರೀತಿ, ಉತ್ತರ ಕೊಟ್ಟ ಧಾಟಿ ಖುಷಿ ತಂದಿತು. ಜಿಲ್ಲೆಯ ಸಿಇಓ ಈ ಉತ್ತಮ ಪದ್ಧತಿಯನ್ನು ಇಡೀ ಜಿಲ್ಲೆಯಲ್ಲಿ ತರಲು ಇಚ್ಛಿಸಿರುವುದಾಗಿ ತಿಳಿಸಿದರು. ಮಕ್ಕಳ ಜೊತೆ ತಾವೂ ಮಕ್ಕಳಾಗಿ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಉತ್ಸಾಹ ತುಂಬುವ ಕೆಲಸ ಮಾಡಿದ ಸಚಿವ ಸುರೇಶ್ ಕುಮಾರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.

Comments

Leave a Reply

Your email address will not be published. Required fields are marked *