ರವಿ ಚನ್ನಣ್ಣನವರ್ ಸ್ಫೂರ್ತಿಯಿಂದ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದೇನೆ – ಎಂ.ಸುರೇಶ

– ಕೆಪಿಎಸ್‍ಸಿಯಲ್ಲಿ 2ನೇ ಸ್ಥಾನ

ಕೊಪ್ಪಳ: ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್‍ಪಿ ರವಿ ಡಿ.ಚೆನ್ನಣ್ಣನವರ್ ಹಲವು ಯುವಕರ ಹೀರೋ ಎಂದು ಕೇಳಿದ್ದೇವೆ. ಅವರ ಸ್ಫೂರ್ತಿಯಿಂದಲೇ ಇದೀಗ ಕೆಪಿಎಸ್ಸಿಯಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಎಂ.ಸುರೇಶ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದಾರೆ.

ವಿವಿಧ ಹುದ್ದೆಗಳ ನೇಮಕಕ್ಕಾಗಿ ನಡೆದ ಕೆಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳದ ಗಂಗಾವತಿ ತಾಲೂಕಿನ ಕಲ್ಲಯ್ಯ ಕ್ಯಾಂಪ್‍ನ ಎಂ.ಸುರೇಶ ಅವರು ಎರಡನೇ ರ್ಯಾಂಕ್ ಪಡೆದಿದ್ದು, ಈ ಮೂಲಕ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಓದಿದ್ದರೂ 2017ರಲ್ಲಿ ನಡೆದ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮೂಲತಃ ಕೃಷಿಕರಾದ ದುರುಗಪ್ಪ ಮತ್ತು ಹನುಮಮ್ಮ ಮಳ್ಳಿಕೇರಿ ದಂಪತಿಯ 6ನೇ ಪುತ್ರರಾದ ಎಂ.ಸುರೇಶ, ಗಂಗಾವತಿ ನಗರದ ವಿವೇಕ ಭಾರತಿ ವಿದ್ಯಾ ಕೇಂದ್ರದಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ್ದಾರೆ. ವಿದ್ಯಾಗಿರಿಯ ಎಂಎನ್‍ಎಂ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯನ್ನು ಶೇ.71ರಷ್ಟು ಅಂಕದೊಂದಿಗೆ ಪೂರ್ಣಗೊಳಿಸಿದ್ದಾರೆ. ಹುಬ್ಬಳ್ಳಿಯ ಪಿಸಿ ಜಾಬೀನ್ ಪಿಯು ಕಾಲೇಜಿನಲ್ಲಿ ಪಿಯು ಓದಿದ್ದು, ಶೇ.86ರಷ್ಟು ಅಂಕಪಡೆದಿದ್ದಾರೆ. ಮೈಸೂರಿನ ವಿದ್ಯಾ ವಿಕಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‍ನಲ್ಲಿ ಪದವಿ ಪಡೆದಿದ್ದು, ಶೇ.68ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ಎರಡನೇ ಯತ್ನದಲ್ಲಿ ಕೆಪಿಎಸ್ಸಿಗೆ ಅರ್ಹತೆ ಪಡೆದಿದ್ದು, ಸಮಾಜ ಕಲ್ಯಾಣ ಇಲಾಖೆ ನೆರವಿನೊಂದಿಗೆ ದೆಹಲಿಯಲ್ಲಿ ತರಬೇತಿ ಪಡೆದಿದ್ದಾರೆ. 9 ತಿಂಗಳ ತರಬೇತಿ ನಂತರ 2017ರಲ್ಲಿ ಕೆಪಿಎಸ್‍ಸಿ ಆಯೋಜಿಸಿದ್ದ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸುರೇಶ, ನನಗೆ ಎಸ್‍ಪಿ ರವಿ ಚನ್ನಣ್ಣನವರ್ ಸ್ಫೂರ್ತಿ, ನಿತ್ಯ 8 ಗಂಟೆ ಓದುತ್ತಿದ್ದೆ. ವರ್ತಮಾನದ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಚಿತ್ರಕಲೆಯಲ್ಲಿ ಆಸಕ್ತಿಯಿದ್ದು, ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರ ವಿಷಯ ಪಡೆದಿದ್ದರಿಂದ ಉತ್ತಮ ಸಾಧನೆ ಮಾಡಲು ಅನುಕೂಲವಾಯಿತು. ಎಸಿ ಆಗಬೇಕೆಂಬ ಆಸೆಯಿತ್ತು, ಡಿವೈಎಸ್ಪಿಗೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಜನ ಸೇವೆಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸುವ ಮೂಲಕ ಮೂಲಕ ಜಿಲ್ಲಾಧಿಕಾರಿಯಾಗುವ ಕನಸು ಹೊಂದಿದ್ದೇನೆ ಎಂದರು.

Comments

Leave a Reply

Your email address will not be published. Required fields are marked *