ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

ಗಾಂಧಿನಗರ: ವಜ್ರದ ಉದ್ಯಮಿಯೊಬ್ಬರು ತಮ್ಮ ಪುತ್ರಿಯ ಮದುವೆ ಸಮಾರಂಭದ ಊಟವನ್ನು ರದ್ದು ಮಾಡಿ ಸುಮಾರು 11 ಲಕ್ಷ ರೂ. ಹಣವನ್ನು ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದ್ದಾರೆ.

ಸೂರತ್‍ನ ವಜ್ರದ ಉದ್ಯಮಿ ದೆವಾಶಿ ಮಾನಿಕ್ ಅವರು ತನ್ನ ಪುತ್ರಿ ಅಮಿ ಮದುವೆ ಸಮಾರಂಭದಲ್ಲಿ ಆಯೋಜಿಸಿದ್ದ ಊಟವನ್ನು ರದ್ದು ಮಾಡಿ, ಊಟಕ್ಕೆ ಮೀಸಲಿಟ್ಟ ಹಣವನ್ನು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಸ್ಥರಿಗೆ ನೀಡಿದ್ದಾರೆ. ಅಲ್ಲದೇ ಸೇವಾ ಸಂಸ್ಥೆಗಳಿಗೆ 5 ಲಕ್ಷ ರೂ. ಧನ ಸಹಾಯ ಮಾಡಿದ್ದಾರೆ.

ಶುಕ್ರವಾರದಂದು ಮಾನಿಕ್ ಅವರ ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಈ ಸಮಾರಂಭದಲ್ಲಿ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ಸುದ್ದಿ ತಿಳಿದು ಪುತ್ರಿ ಮದುವೆಗೆಂದು ಏರ್ಪಡಿಸಿದ್ದ ಊಟವನ್ನು ಉದ್ಯಮಿ ರದ್ದುಗೊಳಿಸಿದ್ದಾರೆ. ಹಾಗೆಯೇ ಹುತಾತ್ಮ ಯೋಧರ ಕುಟುಂಬಕ್ಕೆ ಹಾಗೂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡಿ ದೇಶಭಕ್ತಿ ಮೆರೆದಿದ್ದಾರೆ.

ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 44 ಸಿಆರ್‌ಪಿಎಫ್‌ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *