ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

ನವದೆಹಲಿ: ಜ್ಞಾನವಾಪಿ ಮಸೀದಿ ವಿಚಾರಣೆ ತಡೆ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್ ಇಂದು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಪ್ರಕರಣ ಈಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ವಾರಣಾಸಿ ಸಿವಿಲ್ ಕೋರ್ಟ್‍ನಲ್ಲಿದ್ದ ಇಡೀ ಪ್ರಕರಣವನ್ನು ಇಂದು ಸುಪ್ರೀಂಕೋರ್ಟ್ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಸಿವಿಲ್ ಕೋರ್ಟ್ ನೀಡಿದ ಸರ್ವೆ ಕಾರ್ಯಕ್ಕೆ ತಡೆ ನೀಡಬೇಕು ಎಂದು ಅಂಜುಮನ್ ಇಂತೇಜಾಮಿಯ ಸಮಿತಿ ಹಾಗೂ ಪತ್ತೆಯಾಗಿರುವ ಶಿವಲಿಂಗ ಪೂಜೆಗೆ ಅವಕಾಶ ನೀಡಬೇಕು ಎಂದು ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ಇದನ್ನೂ ಓದಿ: 1 ವರ್ಷ ಜೈಲು ಶಿಕ್ಷೆ – ನ್ಯಾಯಾಲಯಕ್ಕೆ ಶರಣಾದ ಸಿಧು

ವಿಚಾರಣೆ ವೇಳೆ ವಾದ ಮಂಡಿಸಿದ ಹಿಂದೂ ಪರ ವಕೀಲರು, ಜ್ಞಾನವಾಪಿ ಮಸೀದಿಯಲ್ಲಿ ಈಗಾಗಲೇ ಸರ್ವೇ ಕಾರ್ಯ ಮಾಡಿ ಮುಗಿಸಲಾಗಿದೆ. ಹೀಗಾಗಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ಅನುರ್ಜಿತವಾಗಿದೆ. ಈ ಅರ್ಜಿಯನ್ನು ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿದರು. ಇದೇ ವೇಳೆ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

ಪ್ರತಿವಾದ ಸಲ್ಲಿಸಿದ ಮಸೀದಿ ಪರ ವಕೀಲರು, ಇಂತಹ ಅರ್ಜಿಗಳಿಗೆ ಮಹತ್ವ ನೀಡಬಾರದು. ಇಂತಹ ಅರ್ಜಿಗಳನ್ನು ಅನುಮತಿಸಿದರೆ ನಾಳೆ ಇನ್ನೊಂದು ಮಸೀದಿಯು ದೇವಾಲಯವಾಗಿದೆ ಎಂದು ಹೇಳುತ್ತಾರೆ. ಇದು ಈ ನೆಲದ ಮೇಲೆ ಅಗಾಧವಾದ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಲ್ಲದೇ ಮಸೀದಿಯಲ್ಲಿ ವಜುಖಾನ ಸೀಲ್ ಮಾಡಿದ್ದು ಪ್ರಾರ್ಥನೆ ಸಲ್ಲಿಸಲು ತೊಡಕಾಗಿದೆ, ಹೀಗಾಗಿ ಸರ್ವೇ ಕಾರ್ಯಗಳಿಗೆ ತಡೆ ನೀಡಿ ಮೊದಲಿನಂತೆ ಪೂರ್ಣ ಪ್ರಮಾಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ರಾಜ್ಯದ ಮೂರು ಜಿಲ್ಲೆಗಳ ಅದಿರು ರಫ್ತಿಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ವಾದ, ಪ್ರತಿವಾದ ಆಲಿಸಿದ ಪೀಠ, ಜಿಲ್ಲಾ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸುವ ನಿರ್ಧಾರಕ್ಕೆ ಬಂತು. ವಾರಣಾಸಿ ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಬೇಕು. ಹಿರಿಯ ನ್ಯಾಯಾಧೀಶರು ವಿಚಾರಣೆ ಆಲಿಸಬೇಕು ಎಂದು ಸೂಚಿಸಿದ ಪೀಠ, ಶಿವಲಿಂಗ ರಕ್ಷಣೆ ಮತ್ತು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಮೇ. 17ರ ಆದೇಶವನ್ನು ಮುಂದಿನ ಎಂಟು ವಾರಗಳ ವರೆಗೂ ಮುಂದುವರಿಸಬೇಕು ಎಂದು ಆದೇಶ ನೀಡಿತು.

ಜಿಲ್ಲಾಡಳಿತ ಮೇಲೆ ಸುಪ್ರೀಂ ಗರಂ:
ವಿಚಾರಣೆ ವೇಳೆ ಸರ್ವೇ ಅಧಿಕಾರಿಗಳ ವಿರುದ್ಧವೂ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು. ಸರ್ವೇ ನಡೆಸಿದ ಕೆಲವು ಅಂಶಗಳನ್ನು ಉದ್ದೇಶಪೂರ್ವಕವಾಗಿ ಲೀಕ್ ಮಾಡುವುದು ಸರಿಯಲ್ಲ. ಮುಂದೆ ಹೀಗೆ ಆಗಬಾರದು. ಸರ್ವೇ ವರದಿ ಮುಚ್ಚಿದ ಲಕೋಟೆಯಲ್ಲಿ ನೇರವಾಗಿ ಮೊದಲು ಕೋರ್ಟ್‍ಗೆ ಸಲ್ಲಿಕೆಯಾಗಬೇಕು ಎಂದು ಸೂಚಿಸಿತು.

ಇಷ್ಟು ದಿನ ಸಿವಿಲ್ ಕೋರ್ಟ್ ನಲ್ಲಿದ್ದ ಜ್ಞಾನವಾಪಿ ಮಸೀದಿ ಪ್ರಕರಣ ಈಗ ಜಿಲ್ಲಾ ನ್ಯಾಯಾಲಯ ಪ್ರವೇಶಿಸಿದ್ದು ಮುಂದೆ ಹೈಕೋರ್ಟ್‍ಗೂ ಎಂಟ್ರಿಯಾಗುವ ಸಾಧ್ಯತೆ ಹೆಚ್ಚಿದೆ.

Comments

Leave a Reply

Your email address will not be published. Required fields are marked *