ಆರ್ಮಿಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ- ಬಿಪಿನ್ ರಾವತ್

ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಆರ್ಮಿಗೆ ಇದು ಅನ್ವಯವಾಗುವುದಿಲ್ಲ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಸೇನೆಯ ವಾರ್ಷಿಕ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಅವರು, ಸಲಿಂಗಕಾಮಕ್ಕೆ ಸೇನೆಯಲ್ಲಿ ಅವಕಾಶ ನೀಡಲ್ಲ. ಭಾರತೀಯ ಸೇನೆಯ ಕಾನೂನಿನ ವಿಧಿಗಳ ಪ್ರಕಾರ ಸಲಿಂಗಕಾಮಕ್ಕೆ ಅವಕಾಶವಿಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ಸೇನೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ನಾವು ದೇಶದ ಕಾನೂನುಗಳನ್ನು ಮೀರಿದ ವ್ಯಕ್ತಿಗಳಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಸೇನೆಗೆ ಸೇರಿದವರು ಕೆಲವು ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಕೆಲವು ಸಾಮಾನ್ಯರಿಗಿಂತ ನಮಗೆ ಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ಸಲಿಂಗಕಾಮಕ್ಕೆ ಸೇನೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಕೋರ್ಟ್ ತೀರ್ಪು ಏನು?:
ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 6ರಂದು ತೀರ್ಪು ನೀಡಿತ್ತು. ಈ ತೀರ್ಪಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ರದ್ದುಗೊಳಿಸಲಾಗಿದೆ. ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್. ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠವು ಐಪಿಸಿ 377 ಅನ್ನು ಅಸಿಂಧುಗೊಳಿಸಿ ಆದೇಶವನ್ನು ಪ್ರಕಟಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *