ಈ ಆಡಿಯೋದಲ್ಲಿ ಹೊಸದಾಗಿ ಏನಿದೆ? – ಸುಪ್ರೀಂನಲ್ಲಿ ಏನಾಯ್ತು? ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?

ನವದೆಹಲಿ: ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಡಿದ್ದ ಆಡಿಯೋವನ್ನೇ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ ಹೋರಾಟ ಅರ್ಧ ಠುಸ್, ಅರ್ಧ ಸಕ್ಸಸ್ ಆಗಿದೆ.

ಬಿಎಸ್‌ವೈ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾ.ಎನ್.ವಿ.ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಪೀಠದಲ್ಲಿ ಇತ್ಯರ್ಥಗೊಂಡಿದ್ದು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

ಈಗಾಗಲೇ ವಾದ-ಪ್ರತಿವಾದ ಮುಗಿದಿರುವ ಕಾರಣ ಬಿಎಸ್‌ವೈ ಆಡಿಯೋ ಬಗ್ಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಪ್ರತಿವಾದಿಯನ್ನಾಗಿಯೂ ಪರಿಗಣಿಸಲು ಆಗುವುದಿಲ್ಲ. ಆದರೆ ಆದೇಶ ನೀಡುವಾಗ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸುಪ್ರೀಂಕೋರ್ಟಿನ ಈ ಆದೇಶದಿಂದಾಗಿ ಅನರ್ಹರ ಕೇಸು ಒಂದೆರಡು ದಿನಗಳಲ್ಲಿ ಇತ್ಯರ್ಥವಾಗುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಅನರ್ಹರು ಮುಂಬೈಗೆ ತೆರಳುವ ಹಿಂದೆ ಬಿಜೆಪಿ ವರಿಷ್ಠರ ಕೈವಾಡ ಇರುವುದನ್ನು ಹುಬ್ಬಳ್ಳಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸತ್ಯ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಡಿಯೋವನ್ನು ಸಾಕ್ಷಿಯನ್ನಾಗಿ ಕೋರ್ಟ್ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಕಪಿಲ್ ಸಿಬಲ್ ಅವರ ವಾದವನ್ನು ಜೆಡಿಎಸ್ ಪರ ವಕೀಲರಾದ ರಾಜೀವ್ ಧವನ್ ಬೆಂಬಲಿಸಿದರು.

ನ್ಯಾ. ರಮಣ ಹೇಳಿದ್ದೇನು?
ಈ ಆಡಿಯೋದಲ್ಲಿ ಹೊಸದಾಗಿ ಏನಿದೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಸ್ಪೀಕರ್ ಪರ ವಾದದ ವೇಳೆ ಈ ಅಂಶಗಳು ಇತ್ತಲ್ಲವೇ? ನಾವು ಈಗಾಗಲೇ ಎಲ್ಲ ಅಂಶಗಳನ್ನು ಪರಿಗಣಿಸಿದ್ದೇವೆ. ಈಗಾಗಲೇ ವಾದ, ಪ್ರತಿವಾದ ಪೂರ್ಣಗೊಂಡಿದೆ. ಆಡಿಯೋ ಸಂಬಧ ನೋಟಿಸ್ ಸಾಧ್ಯವೇ ಇಲ್ಲ. ನೋಟಿಸ್ ಕೊಟ್ಟರೆ ಆದೇಶ ವಿಳಂಬವಾಗಲಿದೆ. ಆದೇಶದ ವೇಳೆ ಸಾಕ್ಷಿಯಾಗಿ ಆಡಿಯೋ ಪರಿಗಣಿಸುತ್ತೇವೆ ಎನ್ನುವ ವಿಚಾರವನ್ನು ಅರ್ಜಿದಾರರ ಗಮನಕ್ಕೆ ತಂದರು.

ಸುಪ್ರೀಂನಲ್ಲಿ ಮುಂದೆ ಏನಾಗಬಹುದು?
ಅನರ್ಹ ಶಾಸಕರ ಬಗ್ಗೆ ಸಿಎಂ ಮಾತನಾಡಿದ್ದ ಆಡಿಯೋವನ್ನು ಸುಪ್ರೀಂಕೋರ್ಟ್ ಸಾಕ್ಷಿಯನ್ನಾಗಿ ಪರಿಗಣಿಸಿದ ಪರಿಣಾಮ ಅನರ್ಹರಿಗೆ ಟೆನ್ಷನ್ ಶುರುವಾಗಿದೆ. ಸುಪ್ರೀಂಕೋರ್ಟ್ ಏನ್ ತೀರ್ಪು ನೀಡಬಹುದೋ ಏನೋ ಅಂತ ಆತಂಕಕ್ಕೆ ಒಳಗಾಗಿದ್ದಾರೆ.

ಸಾಧ್ಯತೆ 1 – ಒಂದೆರಡು ದಿನಗಳಲ್ಲಿ ತೀರ್ಪು ಬರಬಹುದು
ಸಾಧ್ಯತೆ 2 – ಅನರ್ಹರಿಗೆ ಬೈಎಲೆಕ್ಷನ್ ಸ್ಪರ್ಧೆಗೆ ಅವಕಾಶ ಕೊಡಬಹುದು
ಸಾಧ್ಯತೆ 3 – ಸ್ಪೀಕರ್ ಕಚೇರಿಗೆ ಅರ್ಜಿಗಳನ್ನು ವಾಪಸ್ ಕಳುಹಿಸಬಹುದು
ಸಾಧ್ಯತೆ 4 – ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯಬಹುದು

ಕಾಂಗ್ರೆಸ್ಸಿಗೆ ಜಯವೋ? ಹಿನ್ನಡೆಯೋ?
– ಸಿಎಂ ಆಡಿಯೋ ಬಗ್ಗೆ ತನಿಖೆಗೆ ಆದೇಶಿಸಿಲ್ಲ – ಇದು ಹಿನ್ನಡೆ
– ಸಿಎಂ ಆಡಿಯೋ ಬಗ್ಗೆ ವಿಚಾರಣೆಯೂ ಇಲ್ಲ – ಇದು ಹಿನ್ನಡೆ
– ಅನರ್ಹರ ಆದೇಶ ಕೂಡ ವಿಳಂಬವಿಲ್ಲ – ಇದು ಹಿನ್ನಡೆ
– ಸಿಎಂ ಆಡಿಯೋ ಸಾಕ್ಷ್ಯವಾಗಿಯಷ್ಟೇ ಪರಿಗಣನೆ – ಸ್ವಲ್ಪ ಜಯ

Comments

Leave a Reply

Your email address will not be published. Required fields are marked *