ನವದೆಹಲಿ: ಸುಪ್ರೀಂಕೋರ್ಟ್ ನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್‍ಗೆ ಸುಪ್ರೀಂ ಕೋರ್ಟ್ 50 ಸಾವಿರ ರೂ. ದಂಡವನ್ನು ವಿಧಿಸಿದೆ.
ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠ ದಂಡ ವಿಧಿಸಿ ಆದೇಶ ಹೊರಡಿಸಿದೆ. ಇದನ್ನು ಓದಿ: ಸಾರ್ವಜನಿಕ ಹಣದಲ್ಲಿ ಆನೆ ಪ್ರತಿಮೆ ನಿರ್ಮಾಣ: ಮಾಯಾವತಿಗೆ ಸುಪ್ರೀಂ ಚಾಟಿ
ಬಿಹಾರ ಜೆಡಿಯು ಮತ್ತು ಆರ್‌ಜೆಡಿ ಪಕ್ಷಗಳ ಸಮ್ಮಿಶ್ರ ಸರ್ಕಾರವಿದ್ದಾಗ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಅವರಿಗೆ ಸರ್ಕಾರಿ ಬಂಗಲೆ ಮಂಜೂರು ಆಗಿತ್ತು. ಬಳಿಕ ನಡೆದ ರಾಜಕೀಯ ವಿದ್ಯಮಾನದಲ್ಲಿ ನಿತೀಶ್ ಕುಮರ್ ಅವರು ಆರ್‌ಜೆಡಿಯನ್ನು ತೊರೆದು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದರು.

ಹೊಸ ಸರ್ಕಾರದಲ್ಲಿ ತೇಜಸ್ವಿ ಯಾದವ್ ಅವರಿಗೆ ನೀಡಲಾಗಿದ್ದ ನಿವಾಸವನ್ನು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ಮಂಜೂರು ಮಾಡಲಾಗಿತ್ತು. ಆದರೆ ಈ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ತೇಜಸ್ವಿ ಯಾದವ್ ಹೈ ಕೋರ್ಟ್ ಮೊರೆ ಹೋಗಿದ್ದರು. ಹೈ ಕೋರ್ಟ್ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಆದೇಶಿಸಿತ್ತು.
ಹೈ ಕೋರ್ಟ್ ಆದೇಶವನ್ನು ತೇಜಸ್ವಿ ಯಾದವ್ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕೆ 50 ಸಾವಿರ ರೂ. ದಂಡವನ್ನು ವಿಧಿಸಿದೆ.

ಬಿಹಾರ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ ತೇಜಸ್ವಿ ಯಾದವ್ ಅವರ ಬಂಗಲೆ ರಾಜಭವನ ಮತ್ತು ಮುಖ್ಯ ಮಂತ್ರಿಗಳ ಅಧಿಕೃತ ನಿವಾಸದ ಹತ್ತಿರವೇ ಇದೆ. ತೇಜಸ್ವಿ ಯಾದವ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply