ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್‌ ನೀರು – ಸುಪ್ರೀಂನಲ್ಲಿ ಇಂದು ಏನಾಯ್ತು? ವಾದ ಏನಿತ್ತು?

ನವದೆಹಲಿ: ಕಾವೇರಿ ವಿಚಾರದಲ್ಲಿ (Cauvery Water Dispute) ಕರುನಾಡಿಗೆ ಭಾರೀ ಸಂಕಷ್ಟ ಎದುರಾಗಿದೆ. ಕಾವೇರಿ ಪ್ರಾಧಿಕಾರದ ಆದೇಶದ ವಿಚಾರದಲ್ಲಿ ಸುಪ್ರೀಂಕೋರ್ಟ್ (Supreme Court) ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಹೀಗಾಗಿ ತಮಿಳುನಾಡಿಗೆ (Tamil Nadu) 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲೇಬೇಕಾದ ಸಂಕಷ್ಟ ಸ್ಥಿತಿಗೆ ಕರ್ನಾಟಕ (Karnataka) ಸರ್ಕಾರ ತಲುಪಿದೆ.

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ, ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಪರ ವಕೀಲರು ಮಂಡಿಸಿದ ವಾದವನ್ನು ಪುರಸ್ಕರಿಸಲಿಲ್ಲ. ಪ್ರಾಧಿಕಾರದ ಆದೇಶಕ್ಕೆ ತಡೆ ನೀಡಬೇಕೆಂಬ ಕರ್ನಾಟಕದ ವಾದವನ್ನು ಒಪ್ಪಲಿಲ್ಲ. ಜೊತೆಗೆ ಹೆಚ್ಚಿನ ನೀರು ಹರಿಸುವ ತಮಿಳುನಾಡು ಮನವಿಯನ್ನು ಮನ್ನಿಸಲಿಲ್ಲ.

 

ಉಭಯ ರಾಜ್ಯಗಳ ರೈತರು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಿಲ್ಲ. ಬದಲಾಗಿ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಕಾವೇರಿ ಪ್ರಾಧಿಕಾರ, ಕಾವೇರಿ ನೀರು ನಿಯಂತ್ರಣ ಸಮಿತಿ 15ದಿನಕ್ಕೊಮ್ಮೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿತು. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್‌ ರೊಹ್ಟಗಿ ವಾದ ಮಂಡಿಸಿದರೆ ಕರ್ನಾಟಕ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು.

ತಮಿಳುನಾಡು ವಾದ ಏನು?
ತಮಿಳುನಾಡಿನಲ್ಲಿ 56% ರಷ್ಟು ಮಳೆ ಕೊರತೆ (Rain Deficit) ಅನುಭವಿಸುತ್ತಿದ್ದು, ಸದ್ಯ 6400 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಹೀಗಿದ್ದರೂ ಪ್ರಾಧಿಕಾರ 5000 ಕ್ಯೂಸೆಕ್ ಹರಿಸಲು ಹೇಳಿದೆ. ಆದರೆ ಈ ಆದೇಶವನ್ನು ಕರ್ನಾಟಕ ಪಾಲಿಸುತ್ತಿಲ್ಲ.  ಇದನ್ನೂ ಓದಿ: ಕಾವೇರಿ ಕಿಚ್ಚು – ಶನಿವಾರ ಮಂಡ್ಯ ಬಂದ್‌ಗೆ ಕರೆ

ನೀರು ಹರಿಸುವ ಪ್ರಮಾಣವನ್ನು ನಿರಂತರವಾಗಿ ಕಡಿಮೆ ಮಾಡುತ್ತಿದ್ದು, ಕೇವಲ 2500 ಕ್ಯೂಸೆಕ್ ನೀರನ್ನು ಮಾತ್ರ ಬಿಡುತ್ತಿದೆ. ಮಳೆ ಅಭಾವವಿದೆ ಎಂಬುದನ್ನು ನಾವೂ ಒಪ್ಪುತ್ತೇವೆ. ನೀರಿನ ಮಟ್ಟ ಕಡಿಮೆ ಇದ್ದರೆ ಕಡಿಮೆ ನೀರನ್ನು ನೀಡಬಹುದು. ಆದರೆ ಅವರಲ್ಲಿರುವ ನೀರನ್ನೂ ಕೊಡುವುದಿಲ್ಲ ಎಂದರೆ ಹೇಗೆ? ಕರ್ನಾಟಕಕ್ಕೆ ಅಷ್ಟೇ ಅಲ್ಲ ತಮಿಳುನಾಡಿಗೂ ಸಮಸ್ಯೆಯಿದೆ. ಬೇಡಿಕೆ 7200 ಕ್ಯೂಸೆಕ್ ಇರಬೇಕಾದರೆ ಅದನ್ನು 25%ಗೆ ಇಳಿಸಲಾಗದು. ಕೇವಲ 1000, 2000 ಕ್ಯೂಸೆಕ್ ಮಾತ್ರ ಬಿಡುತ್ತೇವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.

 

ಕರ್ನಾಟಕದ ವಾದ ಏನು?
ಸಿಡಬ್ಲುಎಂಎ ನಿರ್ದೇಶನದ ಬಗ್ಗೆ ನಮಗೆ ಆಕ್ಷೇಪವಿದ್ದರೂ ಪ್ರಾಧಿಕಾರ ಹೇಳಿದಂತೆ ನಾವು ಹೆಚ್ಚಿನ ನೀರನ್ನೇ ತಮಿಳುನಾಡಿಗೆ ಹರಿಸಿದ್ದೇವೆ. 3000 ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿಸಿದ್ರೆ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ. ನಾವು ಹೊಸ ಅರ್ಜಿ ಸಲ್ಲಿಸಿದ್ದು ಅದನ್ನು ಪರಿಶೀಲಿಸಿ. ಮೇಕೆದಾಟು ಡ್ಯಾಂ ವಿಚಾರದಲ್ಲಿ ತಕ್ಷಣ ಅರ್ಜಿ ವಿಚಾರಣೆ ನಡೆಸಿ.

ತ್ರಿಸದಸ್ಯ ನ್ಯಾಯಪೀಠ ಹೇಳಿದ್ದೇನು?
ನಾವು ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಪ್ರತಿ 15 ದಿನಗಳಿಗೊಮ್ಮೆ ಇದರ ಮೇಲೆ ನಿಗಾ ಇಡುತ್ತೇವೆ. ಪ್ರಾಧಿಕಾರಗಳು 2 ವಾರಕ್ಕೊಮ್ಮೆ ಸಭೆಗಳನ್ನು ನಡೆಸಲಿದೆ. ಕರ್ನಾಟಕ, ತಮಿಳುನಾಡು ವಾದವನ್ನು ನಾವು ಒಪ್ಪುವುದಿಲ್ಲ.

 

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]