5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ – ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ನವದೆಹಲಿ: 5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ (Board Exam) ನಡೆಸಲು ಷರತ್ತುಬದ್ಧ ಅನುಮತಿ ನೀಡಿದ್ದ ಹೈಕೋರ್ಟ್‍ನ (High Court) ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ (School) ಸಂಘ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಪ್ರಕರಣವನ್ನು ತುರ್ತು ವಿಚಾರಣೆ ನಡೆಸುವಂತೆ ಸಂಘದ ಪರ ವಕೀಲರು ಮನವಿ ಮಾಡಿದ್ದಾರೆ.

ಸೋಮವಾರ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಪೀಠದ ಮುಂದೆ ಪ್ರಸ್ತಾಪಿಸಿದ ವಕೀಲರು, ರಾಜ್ಯಮಟ್ಟದ ‘ಬೋರ್ಡ್ ಪರೀಕ್ಷೆ’ಗಳನ್ನು ನಡೆಸುವುದರಿಂದ ಮೌಲ್ಯಮಾಪನ ವಿಧಾನವು ವಿದ್ಯಾರ್ಥಿಗಳು (Student) ಮತ್ತು ಶಿಕ್ಷಕರ (Teacher) ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರವು ಪೋಷಕರ ಮತ್ತು ಶಾಲೆಗಳ ಜೊತೆಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ವಾದಿಸಿದರು.

karnataka highcourt

ವಾದ ಆಲಿಸಿದ ಸಿಜೆಐ ಡಿ.ವೈ ಚಂದ್ರಚೂಡ್ ಮಾ. 27ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ವಕೀಲರು ಮಾ. 27ರಂದು ಪರೀಕ್ಷೆಗಳು ಆರಂಭವಾಗಲಿದೆ. ಹೀಗಾಗಿ ಇದಕ್ಕೂ ಮುನ್ನ ವಿಚಾರಣೆ ನಡೆಸಬೇಕು ಎಂದು ಹೇಳಿದರು. ಇದಕ್ಕೆ ಗರಂ ಆದ ಸಿಜೆಐ, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ. ರಾಜ್ಯದಲ್ಲಿ ಯಾವುದು ಉತ್ತಮ ಎಂದು ಹೈಕೋರ್ಟ್‍ಗೆ ಗೊತ್ತಿದೆ ಎಂದರು.

ವಾದ ಮುಂದುವರಿಸಿದ ವಕೀಲರು ನಾವು 4,000 ಶಾಲೆಗಳನ್ನು ಪ್ರತಿನಿಧಿಸುತ್ತೇವೆ, ನಮ್ಮ ಅಭಿಪ್ರಾಯ ಕೇಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಿಜೆಐ ಮಾ. 27ರಂದೇ ನಿಮ್ಮ ಅಭಿಪ್ರಾಯ ಕೇಳಲಾಗುವುದು. ಯಾವುದೇ ಬದಲಾವಣೆ ಇಲ್ಲ ಎಂದರು. ಇದನ್ನೂ ಓದಿ: 5, 8ನೇ ತರಗತಿ ಬೋರ್ಡ್‌ ಪರೀಕ್ಷೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿತ್ತು. ಆದರೆ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಷರತ್ತುಗಳೊಂದಿಗೆ ಬೋರ್ಡ್ ಪರೀಕ್ಷೆ ನಡೆಸಲು ವಿಭಾಗೀಯ ಪೀಠ ಆದೇಶಿಸಿತ್ತು. ಈ ಆದೇಶವನ್ನು ಸದ್ಯ ಸುಪ್ರೀಂಕೋರ್ಟ್‍ನಲ್ಲಿ (Supreme Court) ಪ್ರಶ್ನೆ ಮಾಡಲಾಗಿದೆ. ಇದನ್ನೂ ಓದಿ: ಶೋಭಾ ಡೆವಲಪರ್ಸ್ ಕಚೇರಿಗೆ ಐಟಿ ಶಾಕ್

Comments

Leave a Reply

Your email address will not be published. Required fields are marked *