`ಸೂಪರ್ ಮ್ಯಾನ್’ ಧೋನಿ – 28 ಮೀಟರ್ ಕ್ರಮಿಸಲು ತೆಗೆದುಕೊಂಡಿದ್ದು 6.12 ಸೆಕೆಂಡ್!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಸೂಪರ್ ಮ್ಯಾನ್ ರೀತಿ ಓಡಿ ಬೌಂಡರಿ ಬಳಿ ಬಾಲನ್ನು  ತಡೆದಿದ್ದಾರೆ.

36 ವರ್ಷದ ಎಂಎಸ್ ಧೋನಿ ವಿಕೆಟ್ ಗಳ ಮಧ್ಯೆ ವೇಗವಾಗಿ ಓಡಿ ರನ್ ಕದಿಯುವ ವಿಷಯ ಎಲ್ಲರಿಗೂ ತಿಳಿದ ಸಂಗತಿ. ಆದರೆ ಕೆಲ ದಿನಗಳ ಹಿಂದೆ ಧೋನಿ ಕಳಪೆ ಆಟ ಪ್ರದರ್ಶಿಸಿದ ವೇಳೆ ಅವರ ವಯಸ್ಸನ್ನು ಪ್ರಶ್ನಿಸಿ ಹಲವರು ನಿವೃತ್ತಿ ಘೋಷಿಸುವಂತೆ ಸಲಹೆ ನೀಡಿದ್ದರು. ಆದರೆ ಈ ಪಂದ್ಯದಲ್ಲಿ ವಯಸ್ಸಿನ ವಿಚಾರವನ್ನು ಪ್ರಸ್ತಾಪಿಸಿ ಟೀಕಿಸಿದವರಿಗೆ ತಿರುಗೇಟು ಎನ್ನುವಂತೆ ತನ್ನ ಆಟ ಏನು ಎನ್ನುವಂತೆ ಧೋನಿ ತೋರಿಸಿಕೊಟ್ಟಿದ್ದಾರೆ.

ಚಿನ್ನಸ್ವಾಮಿಯಲ್ಲಿ ಅವರು ನೀಡಿದ ಪ್ರದರ್ಶನ ವೀಕ್ಷಿಸಿದ ಹಲವರು ಮತ್ತೆ ಧೋನಿ ತಮ್ಮ ನೈಜ ಆಟಕ್ಕೆ ಮರಳಿದ್ದಾರೆ ಎಂದು ಪ್ರಶಂಸಿದ್ದಾರೆ. ಆರ್ ಸಿಬಿ ಬ್ಯಾಟಿಂಗ್ 3ನೇ ಓವರ್ ವೇಳೆ ಡಿ ಕಾಕ್ ಅವರ ಬ್ಯಾಟ್ ನ ಟಾಪ್ ಎಡ್ಜ್ ಗೆ ತಾಗಿದ ಚೆಂಡು ಧೋನಿ ಅವರ ಕೈ ತಪ್ಪಿ ಬೌಂಡರಿ ಕಡೆ ಸಾಗಿತ್ತು. ಈ ವೇಳೆ ಪ್ಯಾಡ್ ಧರಿಸಿಯೇ ಚೆಂಡನ್ನು ಬೆನ್ನತ್ತಿ 6.12 ಸೆಕೆಂಡ್‍ನಲ್ಲಿ 28 ಮೀಟರ್ ದೂರವನ್ನು ಕ್ರಮಿಸಿ ಬೌಂಡರಿ ತಡೆದು ತಂಡಕ್ಕೆ 2 ರನ್ ಉಳಿಸಿದ್ದರು.

5 ಸಾವಿರ ರನ್ ದಾಖಲೆ: ರಾಯಲ್ ಚಾಲೆಂಜರ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಧೋನಿ ಕೇವಲ 30 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ಈ ಮೂಲಕ ಟ್ವೆಂಟಿ 20 ಮಾದರಿಯಲ್ಲಿ 5 ಸಾವಿರ ರನ್ ಗಳಿಸಿದ ಮೊದಲ ನಾಯಕ ಎನ್ನುವ ದಾಖಲೆಯನ್ನು ಬರೆದರು.

Comments

Leave a Reply

Your email address will not be published. Required fields are marked *