ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್

– ವೀಕೆಂಡ್‍ನಲ್ಲಿ ಸೂಪರ್ ಮೂನ್ ಸಂಭ್ರಮ
– ವಿಜ್ಞಾನಿಗಳ ಪಾಲಿಗೆ ವಿಸ್ಮಯ, ಜ್ಯೋತಿಷಿಗಳ ಪಾಲಿಗೆ ಭಯ

ಬೆಂಗಳೂರು: ಇಂದು ಹಾಗೂ ನಾಳೆ ಆಗಸದಲ್ಲೊಂದು ವಿಸ್ಮಯ ನಡೆಯಲಿದೆ. ಚಂದದ ಚಂದ್ರಮಾಮ ಇನ್ನಷ್ಟು ಪ್ರಜ್ವಲಿಸುತ್ತಾನೆ. ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್ ಸಂಭ್ರಮ ಇರಲಿದೆ.

ಪ್ರತಿ ತಿಂಗಳು ಹುಣ್ಣಿಮೆ ಘಟಿಸೋದು ಸಾಮಾನ್ಯ. ಆದರೆ ಇಂದು ಶುರುವಾಗಿ ನಾಳೆ ಭಾನುವಾರದವರೆಗೆ ಆಗಸದಲ್ಲಿ ಕಂಗೊಳಿಸುತ್ತಾನಲ್ಲ ಚಂದಿರ ಅದು ಮಾತ್ರ ಕಣ್ಣಿಗೆ ಸೊಗಸಾದ ದೃಶ್ಯ ವೈಭವ. ಈ ಬಾರಿಯ ಮಾಘ ಮಾಸದಲ್ಲಿ ಬಂದ ಹುಣ್ಣಿಮೆ ಚಂದಿರ, ಸೂಪರ್ ಮೂನ್ ಆಗಿದೆ. ಶನಿವಾರ ಸಂಜೆ 4 ಗಂಟೆ 2 ನಿಮಿಷಕ್ಕೆ ಶುರುವಾಗಿ ಭಾನುವಾರ ಮಧ್ಯಾಹ್ನ 1 ಗಂಟೆ 3 ನಿಮಿಷಕ್ಕೆ ಈ ಮಾಘ ಹುಣ್ಣಿಮೆ ಮುಗಿಯಲಿದೆ.

ಸೂಪರ್ ಮೂನ್ ನಿಮ್ಮ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಬೇಗನೆ ಉದಯವಾಗುವ ಚಂದ್ರ ನಿಧಾನವಾಗಿ ಮುಳುಗುತ್ತಾನೆ. ಭೂಮಿಯ ಸಮೀಪದಲ್ಲಿ ಬರುವ ಚಂದ್ರ ನಿಮಗೆ ಹತ್ತಿರದಲ್ಲೇ ಇರುವ ಭಾವನೆಯನ್ನ ಮೂಡಿಸುತ್ತಾನೆ. ಈ ಬಾರಿ ಬೆಳದಿಂಗಳು ಬೆಳಕು ದುಪ್ಪಟ್ಟಾಗಲಿದೆ ಎಂದು ಖ್ಯಾತ ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ ಹೇಳಿದರು.

ವಿಜ್ಞಾನಿಗಳ ಪಾಲಿನ ಈ ವಿಸ್ಮಯ, ಜ್ಯೋತಿಷ್ಯದಲ್ಲಿ ಮಾತ್ರ ಸಣ್ಣ ಆತಂಕ ಹುಟ್ಟಿಸಿದೆ. ಹುಣ್ಣಿಮೆಯು ಶನಿ ನಕ್ಷತ್ರದಲ್ಲಿ ಘಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೌರ್ಣಮಿಯ ಮೇಲೆ ಶನಿಯ ನೇರ ದೃಷ್ಠಿ ಇದೆ. ಗ್ರಹಣದ ಬೆನ್ನಲ್ಲೆ ಬಂದ ಪೌರ್ಣಿಮೆ ಶ್ರೇಷ್ಠದಿನವಾದರೂ ಸೂಪರ್ ಮೂನ್ ಪ್ರಕೃತಿಯ ಮೇಲೆ ಅಸಹಜ ಪರಿಣಾಮ ಬೀರುತ್ತದೆ. ಪೌರ್ಣಿಮೆಯ ಅವಧಿ ಸುದೀರ್ಘವಾಗಿರುವುದರಿಂದ ಮನುಷ್ಯರಲ್ಲಿ ಮಾನಸಿಕ ತೊಳಲಾಟ, ದ್ವಂದ್ವಗಳು ಹೆಚ್ಚಾಗುತ್ತವೆ ಎಂದು ರೇಣುಕಾರಾಧ್ಯ ಗುರೂಜಿ ತಿಳಿಸಿದರು.

ಈ ಮಾಘ ಹುಣ್ಣಿಮೆಯನ್ನ ಭರತ ಹುಣ್ಣಿಮೆ ಅಂತನೂ ಕರೆಯಲಾಗುತ್ತೆ. ಪೂರ್ಣ ಚಂದಿರನ ದರ್ಶನ ಆಗುವುದರಿಂದ ಜಲಗಂಡಾತರವಾಗುವ ಸಾಧ್ಯತೆ ಇದೆ. ಗ್ರಹಣಗಳ ನಂತರ ಬಂದಿರುವ ಪೂರ್ಣ ಹುಣ್ಣಿಮೆಯ ಪರಿಣಾಮ, ರಾಜ್ಯ ಹಾಗೂ ಕೇಂದ್ರದಲ್ಲೂ ಅವಘಡಗಳು ನಡೆಯಬಹುದು ಎಂದು ಗವಿಗಂಗಾಧರದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತರು ಹೇಳಿದರು.

ಸೂಪರ್ ಮೂನ್ ಕೆಟ್ಟ ಪರಿಣಾಮ ತಪ್ಪಿಸಲು ಶಿವನ ಆರಾಧನೆ ಮಾಡಬೇಕು ಅನ್ನೋದು ಜ್ಯೋತಿಷಿಗಳ ಸಲಹೆ. ಆದರೆ ಆಗಸ ನೋಡಿ ಚಂದಮಾಮಾನ ಕಣ್ತುಂಬಿಸಿಕೊಳ್ಳಿ ಎಂಬುವುದು ವಿಜ್ಞಾನಿಗಳ ಸಲಹೆ.

Comments

Leave a Reply

Your email address will not be published. Required fields are marked *