ಸುಳ್ಳು ಜಾಹೀರಾತು ನೀಡಿದರೆ ಪತಂಜಲಿ ಉತ್ಪನ್ನಕ್ಕೆ 1 ಕೋಟಿ ದಂಡ ಹಾಕಬೇಕಾಗುತ್ತೆ: ಸುಪ್ರೀಂ ಎಚ್ಚರಿಕೆ

ನವದೆಹಲಿ: ಪತಂಜಲಿ ಆಯುರ್ವೇದ (Patanjali Ayurved) ಉತ್ಪನ್ನಗಳ ಬಗ್ಗೆ ಸುಳ್ಳು ಮತ್ತು ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ. ಹಾಗೇನಾದರು ಮಾಡಿದರೆ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ (Supreme Court) ಎಚ್ಚರಿಸಿದೆ.

ಯೋಗ ಗುರು ರಾಮ್‌ದೇವ್ (Ramdev) ಸ್ಥಾಪಿಸಿರುವ ಪತಂಜಲಿ ಆಯುರ್ವೇದ್ ಕಂಪನಿಯು ಗಿಡಮೂಲಿಕೆ ಉತ್ಪನ್ನಗಳ ವಿಚಾರದಲ್ಲಿ ವ್ಯವಹರಿಸುತ್ತಿದೆ. ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಔಷಧಿಗಳ ಕುರಿತು ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಅಂಶಗಳೇ ಇವೆ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

ಪತಂಜಲಿ ಆಯುರ್ವೇದದ ಇಂತಹ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಂತಹ ಯಾವುದೇ ಉಲ್ಲಂಘನೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿದೆ.

ಕೊರೊನಾ ಲಸಿಕೆ ಮತ್ತು ಆಧುನಿಕ ಔಷಧಿಗಳ ವಿರುದ್ಧ ರಾಮ್‌ದೇವ್ ಅವರ ಅಭಿಯಾನ ನಡೆಸಿದ್ದಾರೆ ಎಂದು ಆರೋಪಿಸಿ ಐಎಂಎ ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್, 2022 ರ ಆಗಸ್ಟ್ 23 ರಂದು ಕೇಂದ್ರ ಆರೋಗ್ಯ ಸಚಿವಾಲಯ, ಆಯುಷ್ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಓದಿ: ರಿಲಯನ್ಸ್‌, ಪತಂಜಲಿ, ಟಾಟಾ, ಇನ್ಫೋಸಿಸ್‌ ಸೇರಿ 11 ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್‌ ಭದ್ರತೆ

ಪತಂಜಲಿ ಆಯುರ್ವೇದ್‌ಗೆ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಬಾರದು. ಒಂದು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಸುಳ್ಳು ಹೇಳಿಕೆ ನೀಡಿದರೆ ಪ್ರತಿ ಉತ್ಪನ್ನಕ್ಕೆ 1 ಕೋಟಿ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಪೀಠವು ಎಚ್ಚರಿಸಿದೆ.