ರಾಜ್ ಸಮಾಧಿಗೆ ನಮನ ಸಲ್ಲಿಸಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ನಟ, ನಿರ್ದೇಶಕ ಸುನೀಲ್ ಪುರಾಣಿಕ್ ಅವರು ಇಂದು ಡಾ. ರಾಜ್ ಕುಮಾರ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ.

ಗುರುವಾರ ತಾನೇ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಸುನೀಲ್ ಪುರಾಣಿಕ್ ಇಂದು ಕನ್ನಡದ ಮೇರು ನಟ ಡಾ. ರಾಜ್‍ಕುಮಾರ್ ಸಮಾಧಿಗೆ ಭೇಟಿ ನೀಡಿದರು. ಕಠೀರವ ಸ್ಟುಡಿಯೋದಲ್ಲಿ ಇರುವ ವರನಟನ ಸಮಾಧಿಗೆ ಪೂಜೆ ಮಾಡಿ ಗೌರವವನ್ನು ಅರ್ಪಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಸ್ಥಾನಕ್ಕೆ ನಟ-ನಿರ್ದೇಶಕ ಸುನೀಲ್ ಪುರಾಣಿಕ್ ನೇಮಕಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯ ನಿರ್ವಹಿಸಿದ್ದರು. ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸುನೀಲ್ ಪುರಾಣಿಕ್ ಹೆಸರು ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ.

50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರುವ ಹೆಚ್ಚುಗಾರಿಕೆ ಸುನೀಲ್ ಅವರದ್ದು. ಅವುಗಳಲ್ಲಿ ವಾರದ ಮತ್ತು ದೈನಂದಿನ ಧಾರಾವಾಹಿಗಳೂ ಸೇರಿವೆ. ಸಿನಿಮಾಗಳಲ್ಲಿಯೂ ಸುನೀಲ್ ಪುರಾಣಿಕ್ ನಟಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ತಕ್ಷಣ ಜಾರಿಗೆ ಬರುವಂತೆ ಸರ್ಕಾರದಿಂದ ಬುಧವಾರ ಆದೇಶ ಆಗಿದೆ. ಹೀಗಾಗಿ ಇವರು ಗುರುವಾರ ಮಧ್ಯಾಹ್ನ 12:30ಕ್ಕೆ ಅಧಿಕಾರ ಸ್ವೀಕಾರ ಮಾಡಿದ್ದರು. ನಂದಿನಿ ಬಡಾವಣೆಯಲ್ಲಿರುವ ಚಲನಚಿತ್ರ ಅಕಾಡೆಮಿಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದರು.

Comments

Leave a Reply

Your email address will not be published. Required fields are marked *