ಶಿವರಾತ್ರಿ ಮುನ್ನವೇ ಬಂತು ಬೇಸಿಗೆ – ಚಳಿಗಾಲವೇ ಮುಗಿದಿಲ್ಲ ಹೆಚ್ಚಾಯ್ತು ಬಿಸಿಲಿನ ತಾಪ

ಬೆಂಗಳೂರು: ಈ ವರ್ಷ ಋತುಗಳ ಬದಲಾವಣೆಯಲ್ಲಿ ಸ್ವಲ್ಪ ಹೆಚ್ಚಾಗಿಯೇ ವೈಪರೀತ್ಯ ಕಂಡು ಬರುತ್ತಿದೆ. ಗಢ ಗಢ ನಡುಗಿಸುವ ಚಳಿ ಮುಗಿವ ಮುನ್ನವೇ ಧಗಧಗ ಬಿಸಿಲು ಜನರನ್ನು ಬೆವರಲ್ಲಿ ಸ್ನಾನ ಮಾಡಿಸುತ್ತಿದೆ. ಶಿವರಾತ್ರಿ ಮುನ್ನವೇ ಎಲ್ಲೆಡೆ ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿದೆ.

ಹೌದು. ಈಗಿನ್ನೂ ಚಳಿಗಾಲದ ಅವಧಿಯೇ ಮುಗಿದಿಲ್ಲ. ಆಗಲೇ ಬೇಸಿಗೆ ಬಂದು ಬಿಟ್ಟಿದೆ. ಶಿವರಾತ್ರಿ ಇನ್ನೂ 20 ದಿನಗಳು ಇರುವಾಗಲೇ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೆತ್ತಿಯ ಮೇಲೆ ಸುಡುವ ಸೂರ್ಯನ ಬಿಸಿಲಿನ ತಾಪದಿಂದ ಜನ ಚಡಪಡಿಸುವಂತಾಗಿದೆ. ಇದ್ದಕಿದ್ದಂತೆ ಕೆಲ ದಿನಗಳಿಂದ ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ.

ರಾಜ್ಯದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಒಣ ಹವೆ ಮುಂದುವರಿದಿದೆ. ಬಿಸಿಲ ಧಗೆಯ ಪ್ರಮಾಣ 33 ಡಿಗ್ರಿ ಸೆಲ್ಸಿಯಸ್ ನಿಂದ 36 ಡಿಗ್ರಿ ಸೆಲ್ಸಿಯಸ್ ವರೆಗಿನ ಆಸುಪಾಸಿನಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲಿನ ಪ್ರಮಾಣ ಅಧಿಕ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯವೇ ತಾಪಮಾನ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಜನ ಬಿಸಿಲಿನ ಬೇಗೆ ತಾಳಲಾರದೆ ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ. ದೇಹವನ್ನು ತಂಪು ಮಾಡಿಕೊಳ್ಳಲು ಜನರು ಎಳನೀರು, ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜಾ, ಪಪ್ಪಾಯಿ, ಕಿತ್ತಳೆ ಹಣ್ಣುಗಳು ಸೇರಿದಂತೆ ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಸೋಡಾ, ಸರಬತ್ತಿನಂತಹ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಕಾರಣ ಮಹಿಳೆಯರು, ಮಕ್ಕಳು, ವೃದ್ಧರು ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಯುವತಿಯರು ಮುಖಕ್ಕೆ ಸ್ಕಾರ್ಪ್ ಹಾಕಿಕೊಂಡು ಓಡಾಡುವಂತಾಗಿದೆ.

ಈ ಸಲ ಗರಿಷ್ಠ ತಾಪಮಾನ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆ ಕಂಡಿದೆ. ಹಾಗಾಗಿ ಚಳಿ ಮುಗಿಯುವ ಮುನ್ನವೇ ಧಗ ಧಗ ಧಗೆ ಶುರುವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *