ಮಂಡ್ಯದಲ್ಲಿ ಕಣಕ್ಕಿಳಿದ ನಿಖಿಲ್‍ಗೆ ಆನೆ ಬಲ-‘ಜಾಗ್ವಾರ್’ಗೆ ಸಿಕ್ತು ಜಿ.ಮಾದೇಗೌಡರ ಆಶೀರ್ವಾದ

ಮಂಡ್ಯ: ಸಕ್ಕೆರ ನಾಡು ಮಂಡ್ಯ ಲೋಕಸಭಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್‍ಗೆ ಕಾಂಗ್ರೆಸ್ ಹಿರಿಯ ಮುಖಂಡ ಜಿ.ಮಾದೇಗೌಡರ ಅಭಯ ಸಿಕ್ಕಿದ್ದು, ಇತ್ತ ಬಿಜೆಪಿ ಇನ್ನು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ಸಕ್ಕರೆನಾಡು ಮಂಡ್ಯದ ರಣಕಣ ನಾನಾ-ನೀನಾ ಎಂಬ ಸ್ಪರ್ಧೆ ಆರಂಭಗೊಂಡಿದೆ.

ಈ ನಡುವೆ ನಿಖಿಲ್ ಸ್ಪರ್ಧೆಗೆ ಹಿರಿಯ ಕಾಂಗ್ರೆಸ್ ನಾಯಕ ಜಿ. ಮಾದೇಗೌಡ ಬೆಂಬಲಿಸಿದ್ದು, ಆನೆಬಲ ಬಂದಂತಾಗಿದೆ. ಶನಿವಾರ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್, ಕಾಂಗ್ರೆಸ್ ಮುಖಂಡ ಜಿ. ಮಾದೇಗೌಡರನ್ನು ಭೇಟಿಯಾದರು. ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಾದೇಗೌಡ್ರು ಸಾಕಷ್ಟು ಅನುಭವ ಹಂಚಿಕೊಂಡಿದ್ದಾರೆ. ಅವರ ಸಲಹೆಯಂತೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು. ಮಾದೆಗೌಡ್ರು ಮಾತನಾಡಿ, ನಿಖಿಲ್‍ಗೆ ಆಶೀರ್ವಾದ ಮಾಡಿದ್ದೇನೆ ಎಂದು ತಿಳಿಸಿದರು.

ಮಂಡ್ಯ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಯಾವ ನಿರ್ಧಾರ ಕೈಗೊಳ್ತಾರೆ ಅಂತಾ ಕಾದು ನೋಡಿ ಅಭ್ಯರ್ಥಿ ನಿಲ್ಲಿಸೋ ಬಗ್ಗೆ ಚಿಂತಿಸುತ್ತೇವೆ ಎಂದು ತಿಳಿಸಿದರು. ಮಂಡ್ಯದಲ್ಲಿ ಮಾತನಾಡಿದ ಸುಮಲತಾ, ಜಿಲ್ಲೆಯಲ್ಲಿ ಜೆಡಿಎಸ್‍ನ 8 ಜನ ಶಾಸಕರು, ಮೂವರು ಮಂತ್ರಿಗಳು, ಎಂಎಲ್‍ಸಿ ಇದ್ದಾರೆ. ಆದ್ರೂ ನನ್ನ ಕಂಡ್ರೆ ಭಯ ಯಾಕೋ ಗೊತ್ತಿಲ್ಲ ಎಂದು ಹೇಳುವ ಮೂಲಕ ದಳಪತಿಗಳ ಕಾಲೆಳೆದರು.

ಇವತ್ತು ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವರ ವೈರಮುಡಿ ಉತ್ಸವ ಜರುಗಲಿದೆ. ಈ ದಿನದಂದು ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಇವತ್ತು ನಿಖಿಲ್ ಕುಮಾರಸ್ವಾಮಿ, ಸುಮಲತಾ, ರೇವಣ್ಣ ಸೇರಿದಂತೆ ಹಲವರು ಈ ಉತ್ಸವದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಕೃಪೆ ಯಾರಿಗಿದೆ ಅನ್ನೋದನ್ನ ಕಾದು ನೋಡಬೇಕಿದೆ.

https://www.youtube.com/watch?v=QAz3qIkIdLM

Comments

Leave a Reply

Your email address will not be published. Required fields are marked *