ಮಂಡ್ಯ ಜನರ ಪಲ್ಸ್ ಏನು ಅನ್ನೋದು ಪ್ರಚಾರಕ್ಕೆ ಹೋದಾಗ ಗೊತ್ತಾಗಿತ್ತು: ಸುಮಲತಾ

ಬೆಂಗಳೂರು: ನಾನು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಕೆಳಗಡೆ ಇಳಿದಾಗ ಲೀಡ್‍ನಲ್ಲಿ ಇದ್ದೇನೆ ಎಂದು ನಮ್ಮ ಕಾರ್ಯಕರ್ತರು ಫೋನ್ ಮಾಡಿ ತಿಳಿಸಿದ್ದರು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ನಾನು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಕೆಳಗೆ ಬಂದಾಗ 18 ಸಾವಿರ ಲೀಡ್ ಎಂಬ ಮಾತನ್ನು ಮೊದಲು ಕೇಳಿಸಿಕೊಂಡೆ. ಆದರೆ ನನಗೆ ಮೊದಲಿನಿಂದ ಆತ್ಮವಿಶ್ವಾಸ ಇತ್ತು. ಯಾಕೆಂದರೆ ಮಂಡ್ಯ ಜನರ ಪಲ್ಸ್ ಏನು ಅಂತ ಪ್ರಚಾರಕ್ಕೆ ಹೋದಾಗ ಗೊತ್ತಾಗಿತ್ತು ಎಂದರು.

ಅನುಕಂಪ ಎಂಬುದು ಸಹಜ. ಹೀಗಾಗಿ ಅದು ಇತ್ತು. ಅದರ ಜೊತೆಗೆ ದರ್ಶನ್, ಯಶ್, ಮದನ್ ಕುಮಾರ್ ಸೇರಿದಂತೆ ಒಳ್ಳೆಯ ತಂಡ ಇತ್ತು. ಅಷ್ಟೇ ಅಲ್ಲದೇ ಮಂಡ್ಯದಲ್ಲಿ ಕಾಂಗ್ರೆಸ್‍ನ ಸ್ವಾಭಿಮಾನದ ಕಾರ್ಯಕರ್ತರು ಅವರೆಲ್ಲರೂ ಬಹಿರಂಗವಾಗಿ ಅಥವಾ ಪರೋಕ್ಷವಾಗಿ ನನ್ನ ಕಡೆ ಇದ್ದರು. ಅವರು ಮಾಡಿದ್ದ ನಿಂದನೆಗಳೆ ಅವರ ವಿರುದ್ಧವಾಗಿವೆ ಎಂದರು.

ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಇರುತ್ತೇನೆ. ಮಂಡ್ಯಕ್ಕಾಗಿ, ಮಂಡ್ಯದ ಜನತೆಗೋಸ್ಕರ, ಮಂಡ್ಯದ ಅಭಿವೃದ್ಧಿಗೋಸ್ಕರ ನಾನು ಏನು ಬೇಕಾದರೂ ಮಾಡುತ್ತೇನೆ. ಬಿಜೆಪಿಯವರು ಬೆಂಬಲ ಕೊಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಸಹ ಸಹಾಯ ಮಾಡಿದ್ದಾರೆ. ಅವರನ್ನು ನಾನು ಕೈ ಬಿಡಲ್ಲ. ನಿಂದನೆ ಮಾಡಿಕೊಂಡು ರಾಜಕೀಯ ಮಾಡಬೇಡಿ, ಮುಂದಿನ ದಿನಗಳಲ್ಲಿ ಈ ರೀತಿ ನಿಂದನೆ ಮಾಡಿಕೊಂಡು ರಾಜಕೀಯ ಮಾಡಬೇಡಿ ಎಂದು ಸುಮಲತಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *