ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಮಹಿಳೆಯ ಶವ ತುಂಬಿದ್ದ ಸೂಟ್‌ಕೇಸ್ ಪತ್ತೆ

ಲಕ್ನೋ: ಉತ್ತರ ಪ್ರದೇಶದ (Uttar Pradesh) ಹಾಪುರ್ ಜಿಲ್ಲೆಯ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ (Delhi-Lucknow Highway) ಮಹಿಳೆಯೊಬ್ಬಳ ಮೃತದೇಹ ತುಂಬಿದ ಸೂಟ್‌ಕೇಸ್‌ ಪತ್ತೆಯಾಗಿದೆ. ಮೃತ ಮಹಿಳೆಯ ವಯಸ್ಸು ಸುಮಾರು 25 ರಿಂದ 30 ವರ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಜನ ಈ ಸೂಟ್‌ಕೇಸ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಸೂಟ್‌ಕೇಸ್‌ ಪರಿಶೀಲಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಮೃತದೇಹದ ಮೇಲೆ ಅಲ್ಲಲ್ಲಿ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಟ್‌ಕೇಸ್‌ ಪತ್ತೆಯಾದ ಸ್ಥಳದಲ್ಲಿ ಪೊಲೀಸರು ಹಾಗೂ ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹದ ಜೊತೆಗೆ ಬಟ್ಟೆಗಳು ಸಹ ಅದರಲ್ಲಿದ್ದವು. ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮಹಿಳೆ ಶುಕ್ರವಾರ ಸಾವನ್ನಪ್ಪಿರುವ ಸಾಧ್ಯತೆ ಇದೆ. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಎಎಸ್ಪಿ ವಿನೀತ್ ಭಟ್ನಾಗರ್ ಹೇಳಿದ್ದಾರೆ.