ಕಬ್ಬಿನ ಹಣ ಪಾವತಿಸದ್ದಕ್ಕೆ ಸಚಿವರ ಸಕ್ಕರೆ ಕಾರ್ಖಾನೆಗೆ ರೈತರಿಂದ ಮುತ್ತಿಗೆ

ಬೀದರ್: ಕಬ್ಬಿನ ಹಣ ಪಾವತಿ ಮಾಡದ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾಲೀಕತ್ವದ ಬಿಎಸ್ ಕೆ ಸಕ್ಕರೆ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

ಬೀದರ್ ತಾಲೂಕಿನ ಮನ್ನಳ್ಳಿ ಬಳಿ ಇರುವ ಸಚಿವರ ಸಕ್ಕರೆ ಕಾರ್ಖಾನೆಗೆ ಇಂದು ಸಂಜೆ 200ಕ್ಕೂ ಹೆಚ್ಚು ರೈತರು ಆಗಮಿಸಿ, ಬಾಕಿ ಹಣಕ್ಕಾಗಿ ಒತ್ತಾಯಿಸಿದ್ದಾರೆ. ಈ ವೇಳೆ ಕಾರ್ಖಾನೆ ಆಡಳಿತ ಮಂಡಳಿಯನ್ನು ತರಾಟೆ ತೆಗೆದುಕೊಂಡ ರೈತರು, ಹಲವು ತಿಂಗಳಿನಿಂದ ಬಾಕಿ ಹಣ ಪಾವತಿಸುವಂತೆ ಕೇಳಿಕೊಂಡು ಬಂದಿದ್ದೇವೆ. ಆದರೆ ನೀವು ಮಾತ್ರ ಹಣ ನೀಡದೆ ಸತಾಯಿಸುತ್ತಿದ್ದೀರಿ. ಕೂಡಲೇ ನಮ್ಮ ಖಾತೆಗೆ ಹಣ ಹಾಕಿ ಎಂದು ಒತ್ತಾಯಿಸಿದರು.

ಕಾರ್ಖಾನೆಯ ಆವರಣದಲ್ಲಿ ನೂರಾರು ರೈತರು ಸೇರಿದ್ದರಿಂದ ಭದ್ರತೆ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಾರ್ಖಾನೆ ಆಡಳಿತ ಮಂಡಳಿಯು ರೈತರ ಮನವೊಲಿಸಲು ಯಶಸ್ವಿಯಾಗಿದ್ದು, ಒಂದು ತಿಂಗಳ ಒಳಗಾಗಿ ಬಾಕಿ ಹಣ ಪಾವತಿಸುವ ಭರವಸೆ ನೀಡಿದೆ.

ನೀವು ಭರವಸೆ ನೀಡುತ್ತಲೇ ಬಂದಿದ್ದೀರಿ. ಒಂದು ತಿಂಗಳಿನಲ್ಲಿ ಬಾಕಿ ಹಣ ಪಾವತಿಸದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ರೈತರು ಖಡಕ್ ಎಚ್ಚರಿಕೆ ನೀಡಿ, ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

Comments

Leave a Reply

Your email address will not be published. Required fields are marked *