ಮೊಘಲ್‌ ದೊರೆ ಹುಮಾಯೂನ್-ರಾಣಿ ಕರ್ಣಾವತಿಯಿಂದ ಬಂತಾ ‘ರಾಖಿ ಹಬ್ಬ’; ಚರ್ಚೆ ಹುಟ್ಟುಹಾಕಿದ ಸಂಸದೆ ಸುಧಾಮೂರ್ತಿ ಪೋಸ್ಟ್‌

ನವದೆಹಲಿ: ದೇಶದೆಲ್ಲೆಡೆ ರಕ್ಷಾ ಬಂಧನ (Raksha Bandhan) ಆಚರಣೆ ಜೋರಾಗಿದೆ. ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ, ಆಪ್ತರಿಗೆ ರಾಖಿ ಕಟ್ಟಿ ವಿಶ್‌ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲೇ ಇನ್ಫೋಸಿಸ್‌ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ (Sudha Murty) ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಚರ್ಚೆ ಹುಟ್ಟುಹಾಕಿದೆ.

ರಕ್ಷಾ ಬಂಧನಕ್ಕೆ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ, ರಾಜ ಹುಮಾಯೂನ್‌ಗೆ ಒಡಹುಟ್ಟಿದವರ ಸಂಕೇತವಾಗಿ ಒಂದು ದಾರವನ್ನು ಕಳುಹಿಸಿ, ಅವನ ಸಹಾಯವನ್ನು ಕೇಳಿದಳು. ಇಲ್ಲಿಂದ ದಾರದ ಸಂಪ್ರದಾಯ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರೆದಿದೆ ಎಂದು ರಾಖಿ ಹಬ್ಬದ ಇತಿಹಾಸವಿದು ಎಂದು ಸುಧಾಮೂರ್ತಿ ಅವರು ಎಕ್ಸ್‌ನಲ್ಲಿ ವೀಡಿಯೋ ಮಾಡಿ ಪೋಸ್ಟ್‌ ಹಾಕಿದ್ದರು. ಇದನ್ನೂ ಓದಿ: ರಾಖಿ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ – ಮೋದಿಗೆ ರಾಖಿ ಕಟ್ಟಿ ವಿದ್ಯಾರ್ಥಿಗಳ ಸಂಭ್ರಮ

ರಾಣಿ ಕರ್ಣಾವತಿ (ಮೇವಾರ್ ಸಾಮ್ರಾಜ್ಯದಿಂದ) ಅಪಾಯದಲ್ಲಿದ್ದಾಗ, ಆಕೆಯ ರಾಜ್ಯವು ಚಿಕ್ಕದಾಗಿತ್ತು ಮತ್ತು ಆಕ್ರಮಣಕ್ಕೆ ಒಳಗಾಗಿತ್ತು. ಅವಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವಳು ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಒಂದು ಸಣ್ಣ ದಾರವನ್ನು ಕಳುಹಿಸಿದಳು. ನಾನು ಅಪಾಯದಲ್ಲಿದ್ದೇನೆ ದಯವಿಟ್ಟು ನನ್ನನ್ನು ನಿಮ್ಮ ಸಹೋದರಿ ಎಂದು ಪರಿಗಣಿಸಿ, ಬಂದು ನನ್ನನ್ನು ರಕ್ಷಿಸಿ ಎಂದು ಸಂದೇಶ ರವಾನಿಸಿದ್ದಳು.

ಹುಮಾಯೂನ್‌ಗೆ ಇದು ಏನೆಂದು ತಿಳಿಯಲಿಲ್ಲ. ಏನೆಂದು ವಿಚಾರಿಸಿದಾಗ, ಸ್ಥಳೀಯರು ‘ಇದು ಸಹೋದರನಿಗೆ ಸಹೋದರಿಯ ಕರೆ’ ಎಂದು ಹೇಳಿದರು. ಇದು ಭೂಮಿಯ ಸಂಪ್ರದಾಯವಾಗಿದೆ ಎಂದರು. ಚಕ್ರವರ್ತಿ, ನಾನು ರಾಣಿ ಕರ್ಣಾವತಿಗೆ ಸಹಾಯ ಮಾಡುತ್ತೇನೆ ಎಂದು ದೆಹಲಿಯಿಂದ ಹೊರಟರು. ಆದರೆ ಸಮಯಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಕರ್ಣಾವತಿ ನಿಧನರಾಗಿದ್ದರು. ನೀವು ತೊಂದರೆಯಲ್ಲಿದ್ದಾಗ, ಯಾರಾದರೂ ಬಂದು ನನಗೆ ಸಹಾಯ ಮಾಡಬೇಕು ಎಂಬ ಅರ್ಥವನ್ನು ಆ ದಾರ ಸೂಚಿಸುತ್ತದೆ. ಇದು ಬಹಳಷ್ಟು ಅರ್ಥಪೂರ್ಣವಾಗಿದೆ ಎಂದು ಸುಧಾಮೂರ್ತಿ ಅವರು ವಿವರಿಸಿದ್ದಾರೆ. ಇದನ್ನೂ ಓದಿ: ರಕ್ಷಾ ಬಂಧನ; ದುಡಿದು ಕೂಡಿಟ್ಟಿದ್ದ ಹಣವನ್ನು ತಂಗಿ ವಿನೇಶ್‌ ಫೋಗಟ್‌ಗೆ ಕೊಟ್ಟ ಅಣ್ಣ

ಆದರೆ, ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದು ಸುಳ್ಳು ಕಥೆ ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ. ರಕ್ಷಾ ಬಂಧನದ ಇತಿಹಾಸ ಮಧ್ಯಕಾಲೀನದ್ದಲ್ಲ, ಮಹಾಭಾರತದ ಕಾಲಕ್ಕೆ ಹೋಗುತ್ತದೆ ಎಂದು ನೆಟ್ಟಿಗರು ವಾದಿಸಿದ್ದಾರೆ.

ಶಿಶುಪಾಲನನ್ನು ಸಂಹರಿಸಲು ಶ್ರೀಕೃಷ್ಣನು ಸುದರ್ಶನ ಚಕ್ರವನ್ನು ಬಳಸಿದಾಗ ಕೃಷ್ಣನ ಕೈಬೆರಳಿಗೆ ಗಾಯವಾಗುತ್ತದೆ. ಆಗ ದ್ರೌಪದಿ ಸೀರೆಯನ್ನು ಹರಿದು ಶ್ರೀಕೃಷ್ಣನ ಕೈಯಲ್ಲಿ ಗಾಯವಾದ ಭಾಗಕ್ಕೆ ಕಟ್ಟುತ್ತಾಳೆ. ಮುಂದೆ ಶ್ರೀಕೃಷ್ಣನು ದ್ರೌಪದಿಯ ಋಣ ತೀರಿಸುತ್ತಾನೆ. ಈ ಒಂದು ಪರಿಕಲ್ಪನೆ ರಕ್ಷಾ ಬಂಧನದ ಒಂದು ಆರಂಭ ಎಂದು ನೆಟ್ಟಿಗರು ಪ್ರತಿಪಾದಿಸಿದ್ದಾರೆ.