ಬಾಲಿವುಡ್ ನೆಲದಲ್ಲೂ ಕನ್ನಡ ಬಿಟ್ಟು ಕೊಡದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಭಾರತಾದ್ಯಂತ ನಡೆಯುತ್ತಿದೆ. ಮುಂಬೈ, ಕೊಚ್ಚಿ, ಹೈದರಾಬಾದ್, ಚೆನ್ನೈ ಹೀಗೆ ಹಲವು ಕಡೆ ಸುದೀಪ್ ಅಂಡ್ ಟೀಮ್ ಪತ್ರಿಕಾಗೋಷ್ಠಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸುದೀಪ್ ಅವರಿಗೆ ನಾನಾ ರೀತಿಯ ಪ್ರಶ್ನೆಗಳು ಎದುರಾಗುತ್ತಿವೆ. ಅದರಲ್ಲೂ ಬಾಲಿವುಡ್ ನಲ್ಲಿ ಸುದೀಪ್ ವಿಚಿತ್ರ ಪ್ರಶ್ನೆಯೊಂದನ್ನು ಎದುರಿಸಬೇಕಾಯಿತು. ಅದಕ್ಕೆ ಸಮರ್ಥವಾಗಿ, ತಣ್ಣಗೆ ಉತ್ತರ ಕೊಟ್ಟು ಭೇಷ್ ಅನಿಸಿಕೊಂಡರು ಕಿಚ್ಚ.

ಹಿಂದಿ ವಿಚಾರದಲ್ಲಿ ಈಗಾಗಲೇ ಸುದೀಪ್ ಒಂದು ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾಗಿದೆ. ಕನ್ನಡದ ಮೇಲೆ ಹಿಂದಿ ಹೇರಿಕೆ ವಿಚಾರ, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ಸಿನಿಮಾಗಳನ್ನು ಎಳೆತಂದ ದೊಡ್ಡದೊಂದು ಚರ್ಚೆಗೆ ಕಾರಣವಾಗಿತ್ತು. ಆಗಲೂ ಸುದೀಪ್, ತಾಯ್ನುಡಿಯನ್ನು ಬಿಟ್ಟು ಕೊಡಲಿಲ್ಲ. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಸುದೀಪ್ ಅದನ್ನು ಮುಂದುವರಿಸಿದರು. ನಮ್ಮ ನೆಲದ ಕಥೆಯನ್ನು ನಾವು ಹೇಳುತ್ತಿದ್ದೇವೆ. ಬೇರೆಯವರು ತಮ್ಮ ನೆಲದ ಕಥೆಯನ್ನು ಹೇಳುತ್ತಾರೆ. ಕನ್ನಡದಲ್ಲಿ ಯಾವ ರೀತಿಯ ಸಿನಿಮಾಗಳು ಬರುತ್ತಿವೆ ಎನ್ನುವುದನ್ನು ನೋಡುವುದಕ್ಕಾಗಿ ನಿಮಗೆ ಸ್ವಾಗತ ಎಂದು ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಸುದೀಪ್ ಆಹ್ವಾನಿಸಿದರು.

ತೆಲುಗಿನಲ್ಲಿ ಒಳ್ಳೊಳ್ಳೆ ಕಮರ್ಷಿಯಲ್ ಸಿನಿಮಾಗಳು ಬರುತ್ತಿವೆ. ಅವು ಪ್ಯಾನ್ ಇಂಡಿಯಾ ಸಿನಿಮಾಗಳು ಆಗಿವೆ. ತಮಿಳಿನಲ್ಲೂ ಅಂಥದ್ದೇ ಪ್ರಯೋಗವಿದೆ. ಕನ್ನಡದಲ್ಲಿ ಯಾಕಿಲ್ಲ ಎನ್ನುವ ಪ್ರಶ್ನೆಯೊಂದನ್ನು ಪತ್ರಕರ್ತ ಕೇಳಿದಾಗ, ಬಹುಶಃ ನಿಮಗೆ ಕನ್ನಡದ ಬಗ್ಗೆ ತಿಳುವಳಿಕೆ ಕಡಿಮೆಯಿದೆ ಅನಿಸುತ್ತದೆ. ನಮ್ಮಲ್ಲೂ ಅದ್ಭುತ ಸಿನಿಮಾಗಳು ಬಂದಿವೆ. ಯಾವ ರೀತಿಯ ಚಿತ್ರಗಳು ಬಂದಿವೆ ಎಂದು ತಿಳಿದುಕೊಳ್ಳಲು ನಾನು ನಿಮಗೆ ಸ್ವಾಗತ ಮಾಡುತ್ತೇನೆ ಎಂದು ಹೇಳುವ ಮೂಲಕ ಬಿಟೌನ್ ನಲ್ಲೂ ಕನ್ನಡದ ಪ್ರೇಮ ಮೆರೆದಿದ್ದಾರೆ ಸುದೀಪ್. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್ ನ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ದಾಖಲೆ ಮಟ್ಟದಲ್ಲಿ ಅದು ಜನರನ್ನು ತಲುಪಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಟ್ರೈಲರ್ ರಿಲೀಸ್ ಆಗಿದೆ. ಎಲ್ಲ ಭಾಷೆಯಲ್ಲೂ ಟ್ರೈಲರ್ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ.

Live Tv

Comments

Leave a Reply

Your email address will not be published. Required fields are marked *