ಅಗಲಿದ ಗೆಳೆಯನಿಗೆ ಗೆಲುವು ಅರ್ಪಿಸಿದ ಕಿಚ್ಚ ಸುದೀಪ್

ಲಂಡನ್: ನಟ ಕಿಚ್ಚ ಸುದೀಪ್ ಅವರು ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಟೂರ್ನಿಯಲ್ಲಿ ಸುದೀಪ್ ಅವರ ತಂಡ ಗೆಲುವು ಪಡೆದಿದೆ.

ಈ ಕುರಿತು ಮಾಹಿತಿ ನೀಡಿ ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಸುದೀಪ್ ಅವರ ತಂಡ ಮತ್ತೊಮ್ಮೆ ಟೂರ್ನಿ ಗೆದ್ದ ಸಾಧನೆ ಮಾಡಿದೆ. ಕಳೆದ ಬಾರಿಯ ಟೂರ್ನಿಯಲ್ಲೂ ಸುದೀಪ್ ಅವರ ತಂಡ ಗೆಲುವು ಪಡೆದಿತ್ತು.

ಸುದೀಪ್ ತಂಡದಲ್ಲಿ ಅವರ ಸ್ನೇಹಿತ ರಾಜೀವ್ ಸೇರಿದಂತೆ ಹಲವರು ಸ್ಥಾನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಗೆಳೆಯನನ್ನ ಸುದೀಪ್ ನೆನಪಿಸಿಕೊಂಡಿದ್ದು, ಅಗಲಿದ ಗೆಳೆಯ ಧ್ರುವ ಅವರಿಗೆ ಗೆಲುವು ಅರ್ಪಿಸಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ ಧ್ರುವ ಅವರು ಸುದೀಪ್ ರೊಂದಿಗೆ ಪಂದ್ಯದಲ್ಲಿ ಭಾಗಿಯಾಗಿದ್ದರು.

ಟೂರ್ನಿಯ ಸಂದರ್ಭದಲ್ಲಿ ತೆಗೆದುಕೊಂಡಿದ್ದ ಕೆಲ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಸುದೀಪ್, ಲಾರ್ಡ್ಸ್ ಕ್ರೀಡಾಂಗಣದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸುದೀಪ್ ಅವರಿಗೆ ಶುಭ ಕೋರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕಾರ್ಪೋರೇಟ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿಯೇ ಸುದೀಪ್ ಇಂಗ್ಲೆಂಡ್‍ಗೆ ತೆರಳಿದ್ದರು. ವಿಶ್ವಕಪ್ ಟೂರ್ನಿಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೆಣಸಿದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

Comments

Leave a Reply

Your email address will not be published. Required fields are marked *