ಅಂತವರನ್ನ ಶೂ ಲೇಸ್ ಕಟ್ಟಲು ಇಟ್ಟುಕೊಳ್ಳುತ್ತೇನೆ: ವರುಣ್ ಗಾಂಧಿ

ಲಕ್ನೋ: ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನ್‍ಪುರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ತಾಯಿ ಮನೇಕಾ ಗಾಂಧಿ ಪರ ವರುಣ್ ಗಾಂಧಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಶನಿವಾರ ನಡೆದ ಸಮಾವೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿ ಅಭ್ಯರ್ಥಿ ಚಂದ್ರ ಭದ್ರಾಸಿಂಗ್ ಹೆಸರನ್ನು ಪ್ರಸ್ತಾಪಿಸಿದ ವರುಣ್ ಗಾಂಧಿ, ಅಂತವರನ್ನು ನನ್ನ ಶೂ ಲೇಸ್ ಕಟ್ಟಲು ಇಟ್ಟುಕೊಂಡಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವ್ಯಕ್ತಿತ್ವವೇ ಇಲ್ಲದ ಮನುಷ್ಯ ಬದುಕಿದ್ದೂ ಸತ್ತಂತೆ. ದೇವರನ್ನು ಹೊರತುಪಡಿಸಿ ನೀವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಿಮಗೆ ಯಾರು ಏನನ್ನೂ ಮಾಡುವುದಿಲ್ಲ. ನಾನು ಸಂಜಯ್ ಗಾಂಧಿಯವರ ಪುತ್ರ. ಇಲ್ಲಿಯೇ ಇರುತ್ತೇನೆ ಎಂದು ಹೇಳಿದರು.

ವರುಣ್ ಗಾಂಧಿಯವರು ಕಾಂಗ್ರೆಸ್‍ನ ಪ್ರಬಲ ನಾಯಕರಾಗಿದ್ದ ಸಂಜಯ್ ಗಾಂಧಿ ಅವರ ಪುತ್ರ. 1980ರಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿ ಮೃತಪಟ್ಟಿದ್ದರು.

ವರುಣ್ ಗಾಂಧಿ 2014ರ ಲೋಕಸಭಾ ಚುನಾವಣೆಯಲ್ಲಿ ಸುಲ್ತಾನ್‍ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಈ ಬಾರಿ ತಾಯಿ ಮನೇಕಾ ಗಾಂಧಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ತಾಯಿಯ ಕ್ಷೇತ್ರವಾದ ಫಿಲಿಬಿತ್ ನಿಂದ ವರುಣ್ ಗಾಂಧಿ ಸ್ಪರ್ಧೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *