ಮಂಗ್ಳೂರಿನ 40 ದಿನದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

ಬೆಂಗಳೂರು: ಮಂಗಳೂರಿನ 40 ದಿನದ ಮಗು ಸೈಫುಲ್ ಅಝ್ಮಾನ್‍ನ ಒಪೇನ್ ಹಾರ್ಟ್ ಸರ್ಜರಿ ಮಾಡುವಲ್ಲಿ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ಡಾ.ಜಯಂತ್ ಕುಮಾರ್ ಅವರ ತಂಡ ಯಶಸ್ವಿಯಾಗಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದೆ. ಡಾ.ಆನಂದ್, ಡಾ.ಜಯಂತ್ ಸೇರಿದಂತೆ ಒಟ್ಟು 12 ವೈದ್ಯರ ತಂಡ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ ಇನ್ನೂ 3-4 ದಿನ ಮಗುವಿಗೆ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: 7 ದಿನದ ಹಸುಗೂಸಿಗೆ ಹೃದಯ ಸಮಸ್ಯೆ – ಝೀರೋ ಟ್ರಾಫಿಕ್‍ನಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ರವಾನೆ

ಮಗುವಿನ ಚಿಕಿತ್ಸೆಗೆ 2.5 ಲಕ್ಷ ರೂ. ಖರ್ಚಾಗಿದ್ದು, 1 ಲಕ್ಷ ರೂ. ಬಿಪಿಎಲ್ ಕಾರ್ಡಿನಿಂದ ಭರಿಸಲಾಗುವುದು. ಉಳಿದ ಹಣವನ್ನು ಜಯದೇವ ಆಸ್ಪತ್ರೆಯೇ ನೋಡಿಕೊಳ್ಳಲಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನೆಯ ನಿರ್ದೇಶಕ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಗುರುವಾರ ಸೈಫುಲ್‍ನನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ಮೂಲಕ ರವಾನಿಸಲಾಗಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿತ್ತು. ಚಾಲಕ ಹನೀಫ್ ಅವರು ಮಂಗಳೂರಿನಿಂದ ಅಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ 4 ಗಂಟೆ 32 ನಿಮಿಷದಲ್ಲಿ ಬೆಂಗಳೂರಿಗೆ ತಲುಪಿಸಿದ್ದರು. ಇದನ್ನೂ ಓದಿ:ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ

ಮಾರ್ಗ ಹೀಗಿತ್ತು?
ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ ಅಂಬುಲೆನ್ಸ್ ನಲ್ಲಿ ಹೃದಯ ಪಂಪಿಂಗ್ ವ್ಯವಸ್ಥೆ ಮಾಡಿಕೊಂಡು ಕರೆದೊಯ್ಯಲಾಗಿತ್ತು. ಮಂಗಳೂರಿನಿಂದ, ಬಿ.ಸಿ.ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮೂಲಕ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಆಂಬುಲೆನ್ಸ್ ಬಂದಿದ್ದು ಹೆದ್ದಾರಿ ಉದ್ದಕ್ಕೂ ಜನರು ಟ್ರಾಫಿಕ್ ಸಂಚಾರ ಸುಗಮಗೊಳಿಸಿದ್ದರು. ಅಲ್ಲದೆ, ಆಯಾ ಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಎಸ್ಕಾರ್ಟ್ ನೀಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅಂಬುಲೆನ್ಸ್ ಚಾಲಕ ಹನೀಫ್, ಮಗುವಿಗೆ ಪುನರ್ ಜನ್ಮ ಸಿಗಬೇಕು ಎನ್ನುವ ಆಸೆ ನನಗೆ ಇತ್ತು. ಮಂಗಳೂರಿನಿಂದ ಬೆಂಗಳೂರನ್ನು 5 ಗಂಟೆಯಲ್ಲಿ ತಲುಪಬಹುದು ಎಂಬ ಆಲೋಚನೆ ಹೊಂದಿದ್ದೆ. ಅದರಂತೆ 4 ಗಂಟೆ 32 ನಿಮಿಷದಲ್ಲಿ ಬೆಂಗಳೂರನ್ನು ತಲುಪಿದೆ. ಆದರೆ ಯಶವಂತಪುರದಿಂದ ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಗೆ ತಲುಪಲು 15 ನಿಮಿಷ ಹೆಚ್ಚು ಸಮಯ ತೆಗೆದುಕೊಂಡೆ ಎಂದು ಹೇಳಿದ್ದರು.

ಇದೇ ವೇಳೆ ಸಾರ್ವಜನಿಕರು ಚಾಲಕ ಹನೀಫ್ ಅವರಿಗೆ ಮೈಸೂರು ಪೇಟಾ ಹಾಕಿ ಸನ್ಮಾನಿಸಿದ್ದರು. ಹನೀಫ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *