ನಾನು 23 ದಿನಗಳ ಸಂಸದರ ಸಂಬಳವನ್ನು ಪಡೆಯುತ್ತೇನೆ: ಸುಬ್ರಮಣಿಯನ್ ಸ್ವಾಮಿ

ನವದೆಹಲಿ: 23 ದಿನಗಳ ಕಲಾಪ ನಡೆಯದಿರುವುದಕ್ಕೆ ನಾನು ಕಾರಣ ಅಲ್ಲ. ಹೀಗಾಗಿ ನಾನು ಸಂಸದರ ಸಂಬಳವನ್ನು ಪಡೆಯುತ್ತೇನೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಅಧಿವೇಶನದ ಎಲ್ಲಾ ದಿನಗಳೂ ಹಾಜರಿದ್ದೇನೆ. 23 ದಿನಗಳೂ ಕಲಾಪ ನಡೆದಿಲ್ಲ ಇದರಲ್ಲಿ ನನ್ನ ತಪ್ಪೇನು ಇಲ್ಲ. ನಾನು ರಾಷ್ಟ್ರಪತಿಗಳ ಪ್ರತಿನಿಧಿ. ಅವರು ಹೇಳೋ ತನಕ ನಾನು ಹೇಗೆ ಸಂಬಳ ಬೇಡವೆಂದು ಹೇಗೆ ಹೇಳಲಿ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಾರಿ ಅಧಿವೇಶನದ ಎಲ್ಲಾ ದಿನಗಳೂ ವ್ಯರ್ಥವಾಗಿದೆ. ಕಾಂಗ್ರೆಸ್‍ನ ಅಸಂವಿಧಾನಿಕ ರಾಜಕಾರಣದಿಂದಾಗಿ ಲೋಕಸಭೆ ಮತ್ತು ರಾಜ್ಯಸಭಾ ಕಲಾಪಗಳಿಗೆ ಅಡ್ಡಿಯಾಗಿದೆ. ಇದರಿಂದಾಗಿ ಬಹಳಷ್ಟು ಮಸೂದೆಗಳು ಅಂಗೀಕಾರ ಆಗಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಯಾವ ವಿಚಾರಗಳನ್ನು ಚರ್ಚಿಸಿಲ್ಲ. ಸಾರ್ವಜನಿಕರ ಕೆಲಸಗಳನ್ನು ಮಾಡಿದಾಗ ಮಾತ್ರ ಸಂಬಳವನ್ನು ತೆಗೆದುಕೊಳ್ಳಬೇಕು. ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಸಂಸದರು ಅಧಿವೇಶನದ ಸಂಬಳ ಮತ್ತು ಭತ್ಯೆಗಳನ್ನು ತೆಗೆದುಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಮಿತ್ರ ಪಕ್ಷಗಳೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ನಿನ್ನೆ ತಿಳಿಸಿದ್ದರು.

ನಾವು ಜನರ ಹಣವನ್ನು ಪಡೆದು ಪ್ರಜೆಗಳ ಸೇವೆ ಮಾಡುತ್ತೇವೆ. ಜನರ ಸೇವೆ ಮಾಡಲು ಸಾಧ್ಯವಾಗದೇ ಇದ್ದರೆ ಅವರ ಹಣವನ್ನು ಪಡೆಯಲು ನಮಗೆ ಯಾವುದೇ ಹಕ್ಕಿಲ್ಲ ಎಂದು ಅನಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಸಂಬಳ ಮತ್ತು ಭತ್ಯೆ ತೆಗೆದುಕೊಳ್ಳುವುದಿಲ್ಲ ಅನ್ನುವುದು ಸಚಿವ ಸಂಪುಟದ ನಿರ್ಣಯವಾಗಿದೆ. ಅಧಿವೇಶನದ ಎಲ್ಲಾ ದಿನಗಳು ವ್ಯರ್ಥವಾಗಿದ್ದಕ್ಕೆ ವಿರೋಧ ಪಕ್ಷಗಳೇ ಕಾರಣ ಎನ್ನುವ ಸಂದೇಶವನ್ನು ಜನರಿಗೆ ತಿಳಿಸಲು ಎನ್‍ಡಿಎ ಸದಸ್ಯರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *