50 ಸಾವಿರ ರೂ. ಹಣದ ವರ್ಗಾವಣೆಗೆ ಆಧಾರ್ ಕಡ್ಡಾಯ

ನವದೆಹಲಿ: ಪಾನ್ ಕಾರ್ಡ್ ಮತ್ತು ಆದಾಯ ತೆರಿಗೆ ವಿವರ ಸಲ್ಲಿಕೆಗೆ ಆಧಾರ್ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಈಗ ಬ್ಯಾಂಕ್ ಖಾತೆ ತೆರೆಯಲು ಮತ್ತು 50 ಸಾವಿರ ರೂ. ಹಣದ ವರ್ಗಾವಣೆಗೆ ಆಧಾರ್ ಅನ್ನು ಕಡ್ಡಾಯಗೊಳಿಸಿದೆ.

ಬ್ಯಾಂಕ್ ಖಾತೆಗಳಿಗೆ ಆಧಾರ್ ಅನ್ನು ಈ ಹಿಂದೆ ಕಡ್ಡಾಯ ಮಾಡಿದ್ದ ಕೇಂದ್ರ ಸರ್ಕಾರ ಈಗ, 2017ರ ಡಿಸೆಂಬರ್ 31ರ ಒಳಗಡೆ ಕಡ್ಡಾಯವಾಗಿ ಖಾತೆಗೆ ಆಧಾರ್ ಜೋಡಣೆ ಮಾಡಬೇಕು. ಒಂದು ವೇಳೆ ಜೋಡಣೆ ಮಾಡದೇ ಇದ್ದರೆ ಬ್ಯಾಂಕ್ ಖಾತೆಯನ್ನು ಅಸಿಂಧುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕಂಪೆನಿಗಳು, ವ್ಯಕ್ತಿಗಳು, ಜೊತೆಯಾಗಿ ವ್ಯವಹಾರ ನಡೆಸುವ ಮಂದಿ 50 ಸಾವಿರ ರೂ. ಹಣದ ವ್ಯವಹಾರ ನಡೆಸಿದರೆ ಆಧಾರ್ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದೆ.

ಜೂನ್ 1ರಿಂದ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಮತ್ತು ಪಾನ್ ಕಾರ್ಡ್ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಆಧಾರ್ ನಂಬರ್ ನೀಡಬೇಕೆಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಈ ಹಿಂದೆ ತಿಳಿಸಿತ್ತು.

2 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಡೆಸುವ ಮಂದಿಗೆ ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಲಾಗುವುದು ಎಂದು ಈಗಾಗಲೇ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರ ಈ ವರ್ಷದ ಏಪ್ರಿಲ್ 1ರ ಬಳಿಕ 2 ಲಕ್ಷ ರೂ. ನಗದು ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧ ಇದ್ದರೂ 2 ಲಕ್ಷ ರೂ. ನಗದು ವ್ಯವಹಾರ ನಡೆಸಿದರೆ ಅಂತವರ ಮೇಲೆ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

ಅಕ್ರಮವಾಗಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆಸಿದವರ ಮಾಹಿತಿಯನ್ನು blackmoneyinfo@incometax.gov.in ಇಮೇಲ್ ಮಾಡುವಂತೆ ತೆರಿಗೆ ಇಲಾಖೆ ಜನರಲ್ಲಿ ಕೇಳಿಕೊಂಡಿದೆ.

 

Comments

Leave a Reply

Your email address will not be published. Required fields are marked *