‘ಸ್ಟೈಲ್ ಐಕಾನ್ ರಾಜಾಹುಲಿ’ ವಿಂಟರ್ ಸೀಸನ್ ಬ್ರ್ಯಾಂಡ್ ಬಟ್ಟೆಗಳಿಗೆ ಅಂಬಾಸಿಡರ್..!

[ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ ನಾವು ಈ ವಾರದಿಂದ ‘ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ…!’ ಅಂಕಣ ಆರಂಭಿಸುತ್ತಿದ್ದೇವೆ.]

ದಾವೋಸ್‍ನಲ್ಲಿರುವ ಬಿಎಸ್‍ವೈ ಮೈನಡುಗುವ ಚಳಿಗೆ ಫುಲ್ ಪ್ಯಾಕ್ ಆಗಿದ್ದಾರೆ. ಸೂಟು ಬೂಟು ಅದ್ರ ಮೇಲೊಂದು ವಿಂಟರ್ ಕೋಟು, ತಲೆಗೊಂದು ಮಫ್ಲರ್, ಕೈಗೆ ಗ್ಲೌಸ್ ಕತ್ತಿನಲ್ಲಿ ಸ್ಟೈಲ್ ಆಗಿ ಹಾಕಿಕೊಂಡ ಸ್ಕಾರ್ಫ್, ಖಡಕ್ ಲುಕ್‍ಗೆ ಕೂಲಿಂಗ್ ಗ್ಲಾಸ್..! ಥೇಟು ಸಿನ್ಮಾ ಹೀರೋನಾ ಮೀರಿಸೋ ಲುಕ್..!

 ದಾವೋಸ್‍ನಲ್ಲಿ ಬಿಎಸ್‍ವೈ ಅವತಾರದ ಫೋಟೋ ನೋಡಿ ಪಂಚೆ ಮೇಲೇರಿಸಿಕೊಂಡು ಸಿದ್ದರಾಮಯ್ಯ ಕೂಡ ಯಡಿಯೂರಪ್ಪ ಸಣ್ಣವಯಸ್ಸಿನ ಹುಡ್ಗ ಕಂಡಂಗೆ ಕಾಣ್ಸಲ್ವೇ ಅಂತಾ ಆಪ್ತರ ಬಳಿ ಹೇಳ್ಕೊಂಡಿದ್ರಂತೆ. ಅದ್ ಬಿಟ್ಹಾಕಿ ಯಡಿಯೂರಪ್ಪ ಮೈನಡುಗಿಸುವ ಚಳಿಯಲ್ಲೂ ಸ್ಟೈಲ್ ಆಗಿ ಪೋಸ್ ಕೊಡೋದನ್ನು ನೋಡಿ ಕೆಲ ಬಟ್ಟೆಶಾಪ್‍ನವರು ಕರ್ನಾಟಕದ ವಿಂಟರ್ ಸೀಸನ್ ಬಟ್ಟೆಗಳಿಗೆ ರಾಜಾಹುಲಿನೇ ಬ್ರ್ಯಾಂಡ್ ಅಂಬಾಸಿಡರ್ ಮಾಡಿಬಿಡುವ ಅಂತಾ ನಿರ್ಧಾರ ಮಾಡಿದ್ದಾರಂತೆ. ಬಿಎಸ್‍ವೈ ವೆರೈಟಿ ವೆರೈಟಿ ಫೋಟೋ ಅವ್ರ ಲುಕ್ ಕೊಟ್ಟ ಫೋಟೋಗಳನ್ನೆಲ್ಲ ಎತ್ತಿಟ್ಟುಕೊಂಡಿರುವ ಕೆಲ ಬ್ರ್ಯಾಂಡ್ ಬಟ್ಟೆ ಶೋ ರೂಂನವರು ನೆಕ್ಸ್ಟ್ ಇಯರ್ ಚಳಿಗಾಲಕ್ಕೆ ರಾಜಾಹುಲಿ ಕಾಲ್ ಶೀಟ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರಂತೆ. ಬಿಎಸ್ ವೈ ಖಡಕ್ ಲುಕ್‍ಗೆ ಮಾಡೆಲ್‍ಗಳೆಲ್ಲ ಹುಣಸೆ ಹಣ್ಣು ತಿಂದವರಂಗೆ ಮುಖವೆಲ್ಲ ಹುಳಿ ಹುಳಿ ಮಾಡ್ಕೊಂಡವ್ರಂತೆ..! ಆದ್ರೇ ರಾಜಾಹುಲಿನ ಚಳಿಗಾಲದ ಸೀಸನ್ ಬಟ್ಟೆಗೆ ಬ್ರ್ಯಾಂಡ್ ಅಂಬಾಸಿಡರ್ ಮಾಡೊದು ಓಕೆ, ಆದ್ರೇ ಅವ್ರ ಫೋಟೋ ತೆಗೆಯುವಾಗ ಸ್ಮೈಲ್ ಪ್ಲೀಸ್ ಅಂತಾ ಹೇಳುವ ಧಮ್ ಇರುವ ಫೋಟೋಗ್ರಾಫರ್ ಯಾರಿದ್ದಾರೆ ಅಂತಾನೂ ಭರ್ಜರಿ ಹುಡುಕಾಟ ನಡೆದಿಯಂತೆ..!

ಲಾಸ್ಟ್ ಕಿಕ್- ಚಳಿಗಾಲಕ್ಕೆ ಯಡಿಯೂರಪ್ಪ ಇರಲಿ… ಬೇಸಿಗೆ ಬಟ್ಟೆಗೆ ಪಂಚೆ ಉಟ್ಕೊಂಡು ನಾನೇ ಬ್ರ್ಯಾಂಡ್ ಅಂಬಾಸಿಡರ್ ಅಂತಾ ಟಗರು ಹೇಳ್ಕೊಂಡು ಓಡಾಡ್ತಿದೆಯಂತೆ..!

———–

‘ಗೂಳಿ’ಯಿಂದ ಎಸ್ಕೇಪ್ ಆದ ರೇಣುಕಾಚಾರ್ಯರಿಂದ ಪಶುಸಂಗೋಪನೆ ಇಲಾಖೆ ಮೇಲೆ ಕಣ್ಣು..!

ಪದೇ ಪದೇ ಗೂಳಿಯಿಂದ ಗುಮ್ಮಿಸಿಕೊಳ್ಳುವ ಹೊತ್ತಿಗೆ ಟಪಕ್ ಅಂತಾ ಹೆಂಗೋ ಹಾರಿ ಎಸ್ಕೇಪ್ ಆಗುವ ಹೊನ್ನಾಳಿ ಹೀರೋ ರೇಣುಕಾಚಾರ್ಯ ಈ ಹಿಂದೆ ತನಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತಾ ಶ್ಯಾನೆ ಬೇಸರ ಮಾಡ್ಕೊಂಡಿದ್ರು. ಬೇಜಾರಿಲ್ಲ ಬೇಜಾರಿಲ್ಲ ಅಂತಾ ಮಾಧ್ಯಮದ ಮುಂದೆ ಹೇಳ್ತಾ ಇದ್ರೂ ಅವತ್ತೆಲ್ಲ ಕಣ್ಣೀರು ಕಾಣಬಾರದು ಅಂತಾ ಕಪ್ಪು ಕನ್ನಡಕ ಹಾಕಿಕೊಂಡು ಓಡಾಡಿದ್ದೇ ಓಡಾಡಿದ್ದು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆ ಕೊಟ್ಟು ಕಣ್ಣೊರೆಸಿಕೋ ಅಂತಾ ಕರ್ಚೀಫು ಕೂಡ ಕೊಟ್ರಂತೆ ಯಡಿಯೂರಪ್ಪ. ಗೂಳಿಯಿಂದ ಗುಮ್ಮಿಸಿಕೊಂಡು ಓಡಾಡು ನೀನು ಅಂತಾ ಬಿಎಸ್‍ವೈ ಬೈದ್ರೂ ಅಳುಮುಖದ, ಒಮ್ಮೊಮ್ಮೆ ಕೆಂದಾವರೆಯಂತೆ ಅರಳಿದಂತೆ ಕಾಣುವ ರೇಣುಕಾಚಾರ್ಯ ಕಂಡ್ರೆ ಬಿಎಸ್‍ವೈಗೂ ಒಂಥರ ಪ್ರೀತೀನೆ..! ಬಿಎಸ್‍ವೈ ಮನೆಗೆ ಸೆಕ್ಯೂರಿಟಿಯವರು ದಿನಾ ಇನ್ ಟೈಂಗೆ ಬರ್ತಾರೋ ಇಲ್ವೋ ಆದ್ರೇ ರೇಣುಕಾಚಾರ್ಯ ಮಾತ್ರ ಡೈಲಿ ಸಿಎಂ ಮನೆಗೆ ಬೆಳಗ್ಗೆ ಒಂದ್ಸಲ ಸಂಜೆ ಒಂದ್ಸಲ ಬಂದ್ ಹೋಗ್ತಾರೆ. ಇಂತಿಪ್ಪ ರೇಣುಕಾಚಾರ್ಯಗೆ ಈಗ ಮತ್ತೆ ಸಂಪುಟ ವಿಸ್ತರಣೆ ಟೈಂನಲ್ಲಿ ಲೈಟ್ ಆಗಿ ಆಸೆ ಚಿಗುರಿಕೊಳ್ತಿದೆಯಂತೆ. ಗೂಳಿಯಿಂದ ಕೊನೆಕ್ಷಣದಲ್ಲಿ ಪದೇ ಪದೇ ನಾನು ಎಸ್ಕೇಪ್ ಆಗೋದನ್ನು ನೋಡಿ ನಮ್ ಸಾಹೇಬ್ರು ಇಂಪ್ರೆಸ್ ಆಗವ್ರೇ, ಈ ಬಾರಿ ಹೇಳೋಕ್ಕಾಗಲ್ಲ, ಪಶುಸಂಗೋಪನೆ ಇಲಾಖೆ ಆಫರ್ ಕೊಟ್ರೂ ಕೊಡಬಹುದು ಅಂತಾ ರೇಣುಕಾಚಾರ್ಯ ಆಪ್ತರ ಬಳಿ ಹೇಳ್ಕೊಂಡು ಓಡಾಡ್ತಿದ್ದಾರೆ ಅಂತಾ ಹೊನ್ನಾಳಿಯಲ್ಲೇ ಸುದ್ದಿಯೋ ಸುದ್ದಿ..!

[ಈ ಬರಹದ ಹಕ್ಕು ಮತ್ತು ಇದರಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳು ಲೇಖಕರದ್ದು.]

Comments

Leave a Reply

Your email address will not be published. Required fields are marked *