ಅಧಿಕಾರಿಯಿಂದಾಗಿ ಪ್ರವಾಸಕ್ಕೆ ಬಿತ್ತು ಬ್ರೇಕ್- ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ರಾತ್ರಿಯಿಡೀ ಧರಣಿ

ಬಾಗಲಕೋಟೆ: ಶಾಲಾ ಪ್ರವಾಸಕ್ಕೆಂದು ಸಿದ್ಧಗೊಂಡ ವಿದ್ಯಾರ್ಥಿಗಳು ಅಧಿಕಾರಿಯ ಸ್ಪಂದನೆ ಸಿಗದ ಕಾರಣ ರಾತ್ರಿಪೂರ್ತಿ ವಸತಿ ಶಾಲೆಯ ಆವರಣದಲ್ಲೇ ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಯ 200 ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಪ್ರವಾಸಕ್ಕೆ ಹೋಗಲು ಸಿದ್ಧವಾಗಿದ್ದರು. ಅವರಿಗಾಗಿ ಕೆಎಸ್ ಆರ್‍ಟಿಸಿಯ ನಾಲ್ಕು ಬಸ್ ಗಳು ಸಿದ್ಧಗೊಂಡಿದ್ದವು. ಅದರೆ ಪ್ರವಾಸಕ್ಕೆ ಅಲ್ಪಸಂಖ್ಯಾತ ಮೊರಾರ್ಜಿ ಶಾಲೆಯ ಜಿಲ್ಲಾ ಅಧಿಕಾರಿ ಅನುಮತಿ ನೀಡಿಲ್ಲ. ಸ್ಥಳಕ್ಕೆ ಅಧಿಕಾರಿ ಬಂದು ಅನುಮತಿ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಇಡೀ ರಾತ್ರಿ ಬ್ಯಾಗ್, ತಿಂಡಿತಿನಿಸು ಸಮೇತ ಕಾದು ಕುಳಿತಿದ್ದರು. ಆದ್ರೆ ಸ್ಥಳಕ್ಕೆ ಅಧಿಕಾರಿ ಬಾರದೇ ಇದ್ದಾಗ ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು.

ಊಟದ ತಟ್ಟೆಗಳನ್ನು ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳಿನಿಂದ ನಿರಂತರವಾಗಿ ಅನುಮತಿಗೆ ಪ್ರಯತ್ನ ಮಾಡುತ್ತಿದ್ದು, ಅಧಿಕಾರಿಗಳು ಅನುಮತಿ ನೀಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಗೊಂದಲಕ್ಕೆ ಶಾಲಾ ಪ್ರಾಂಶುಪಾಲ ಮತ್ತು ಸಹಶಿಕ್ಷಕರ ಮಧ್ಯೆ ಹೊಂದಾಣಿಕೆ ಇಲ್ಲದಿರೋದು ಕಾರಣವಾಗಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ವಿದ್ಯಾರ್ಥಿಗಳ ಪ್ರವಾಸಕ್ಕೆ ಇದೀಗ ಬ್ರೆಕ್ ಬಿದ್ದಿದೆ.

Comments

Leave a Reply

Your email address will not be published. Required fields are marked *