ಮಂಡ್ಯ ವಿವಿ ಉಳಿಸಲು ಹೋರಾಟಕ್ಕೆ ಮುಂದಾದ ವಿದ್ಯಾರ್ಥಿಗಳು

ಮಂಡ್ಯ: ಜಿಲ್ಲೆಯಲ್ಲಿ ಇದೀಗ ವಿಶ್ವವಿದ್ಯಾಲಯದ ಕಿಚ್ಚು ಎದ್ದಿದ್ದು, ಮಂಡ್ಯ ವಿವಿ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯವನ್ನು ಸ್ಥಗಿತ ಮಾಡಿ ಎಂದಿನಂತೆ ಅಟೋನೋಮಸ್‍ನಲ್ಲೇ ಮುಂದುವರಿಸಿಕೊಂಡು ಹೋಗುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಆದೇಶವನ್ನು ವಿರೋಧಿಸಿ ಇದೀಗ ವಿದ್ಯಾರ್ಥಿಗಳು ಎಲ್ಲಾ ಪರೀಕ್ಷೆಗಳನ್ನು ಬಹಿಷ್ಕಾರ ಮಾಡಿ, ಮಂಡ್ಯ ವಿವಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯ ಸರ್ಕಾರಿ ಮಹಾವಿದ್ಯಾಲಯದ ಮುಂಭಾಗ ಇದೀಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಈಗಾಗಲೇ ವಿದ್ಯಾರ್ಥಿಗಳು ಒಂದು ಸೆಮಿಸ್ಟರ್ ಪರೀಕ್ಷೆಯನ್ನು ಮಂಡ್ಯ ವಿವಿಯ ನಿರ್ದೇಶನದಲ್ಲಿ ಬರೆದಿದ್ದು, ಇದೀಗ ಅಟೊನೋಮಸ್‍ನಲ್ಲಿ ಪರೀಕ್ಷೆ ಬರೆಯಿರಿ ಎಂದು ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಹೀಗಾಗಿ ಸರ್ಕಾರ ಮಂಡ್ಯ ವಿವಿಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಸಂಸದೆ ಸುಮಲತಾ ಅಂಬರೀಶ್ ಅವರು ಸ್ವಾಭಿಮಾನದ ಹೆಸರಲ್ಲಿ ಗೆದ್ದಿದ್ದಾರೆ. ಅವರ ಗೆಲುವಿಗೆ ವಿದ್ಯಾರ್ಥಿಗಳ ಮತಗಳು ಸಹ ಪ್ರಮುಖ ಕಾರಣ. ಹೀಗಾಗಿ ಅವರು ಸ್ವಾಭಿಮಾನದಿಂದ ಬಂದು ವಿದ್ಯಾರ್ಥಿಗಳಿಗೆ ಬಂಬಲ ನೀಡಿ ಮಂಡ್ಯ ವಿವಿಯನ್ನು ಉಳಿಸಬೇಕು. ಯಶ್-ದರ್ಶನ್ ಸಹ ಜೋಡೆತ್ತು ಎಂದು ಸುಮಲತಾ ಅವರ ಪರ ನಿಂತು ಅವರನ್ನು ಗೆಲ್ಲಿಸಿದ್ದಾರೆ. ಈಗ ಮಂಡ್ಯ ವಿವಿ ಉಳಿಸಲು ಸಹ ಅವರು ಮುಂದಾಗಬೇಕು. ಮಂಡ್ಯ ಶಾಸಕ ಶ್ರೀನಿವಾಸ್ ಕೂಡ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ರದ್ದು ಮಾಡಿದ್ದು ಯಾಕೆ?
ಒಂದು ವರ್ಷದ ಹಿಂದೆ ಸರ್ಕಾರ ಮಂಡ್ಯ ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿತ್ತು. ಈಗ ಮಂಡ್ಯ ವಿವಿ ವಿಶೇಷ ಅಧಿಕಾರಿಯಾಗಿದ್ದ ಮಹದೇವನಾಯಕ ಅವರು ಅಕ್ರಮವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ರಮ ನೇಮಕಾತಿ ಹಾಗೂ ಕೋರ್ಸ್‍ಗಳನ್ನು ತೆರೆದಿದ್ದ ಮಹದೇವನಾಯಕ ಅವರನ್ನು ಸರ್ಕಾರ ಅಮಾನತುಗೊಳಿಸಿದ ಬೆನ್ನಲ್ಲೇ ವಿಶ್ವವಿದ್ಯಾಲಯವನ್ನು ಸರ್ಕಾರ ರದ್ದು ಪಡಿಸಿ ಆದೇಶಿಸಿದೆ.

ಈಗಾಗಲೇ ಒಂದು ಸೆಮಿಸ್ಟರ್ ಪರೀಕ್ಷೆಯನ್ನು ಮಂಡ್ಯ ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಇದೀಗ ಅಟೊನೋಮಸ್‍ನಲ್ಲಿ ಪರೀಕ್ಷೆ ಎದುರಿಸಿ ಎಂದು ಹೇಳಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರು ವಿದ್ಯಾರ್ಥಿಗಳು ನಾವು ಅಟೊನೋಮಸ್‍ನಲ್ಲಿ ಪರೀಕ್ಷೆ ಬರೆಯಲ್ಲ. ನಾವು ಕಾಲೇಜಿಗೆ ಸೇರ್ಪಡೆಯಾಗಿದ್ದು ಮಂಡ್ಯ ವಿಶ್ವವಿದ್ಯಾಲಯ ಎಂದು ಆದರೆ ಈಗ ನಾವು ಅಟೊನೋಮಸ್ ಎಂದು ಹೇಗೆ ಪರೀಕ್ಷೆ ಬರೆಯುವುದು. ವಿಶ್ವವಿದ್ಯಾಲಯದ ಸರ್ಟಿಫಿಕೇಟ್‍ಗೆ ಬೆಲೆ ಇದೆ, ಆದರೆ ಅಟೊನೋಮಸ್‍ನ ಸರ್ಟಿಫಿಕೇಟ್‍ಗೆ ಬೆಲೆ ಕಡಿಮೆ. ಹೀಗಾಗಿ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪರೀಕ್ಷೆಗಳನ್ನು ಬಹಿಷ್ಕಾರ ಮಾಡಿದ್ದಾರೆ.

ಯಾರೋ ಅವರ ಸ್ವಾರ್ಥಕ್ಕಾಗಿ ಎಸಗಿರುವ ಅಕ್ರಮಕ್ಕೆ ಸರ್ಕಾರ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳು ಚೆಲ್ಲಾಟ ಆಡುತ್ತಿವೆ. ಈಗ ಮಂಡ್ಯದಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಕಿಡಿಕಾರುತ್ತಿದ್ದಾರೆ.

Comments

Leave a Reply

Your email address will not be published. Required fields are marked *