ದೈಹಿಕ ಶಿಕ್ಷಕರು ಬೇಕು – ಕಣ್ಣೀರು ಹಾಕಿ, ಸಂಘಟನಾಕಾರರ ಕಾಲಿಗೆ ಬಿದ್ದ ವಿದ್ಯಾರ್ಥಿಗಳು

ಯಾದಗಿರಿ: ದೈಹಿಕ ಶಿಕ್ಷಕರನ್ನು ವರ್ಗಾಯಿಸಿದ್ದರಿಂದ ವಿದ್ಯಾರ್ಥಿಗಳು ತೀವ್ರ ಬೇಸರಗೊಂಡಿದ್ದು, ಕಣ್ಣೀರು ಹಾಕಿ, ಗೋಗರೆದು, ಸಂಘಟನಾಕಾರರ ಕಾಲಿಗೆ ಬಿದ್ದಿದ್ದಾರೆ. ಹೇಗಾದರೂ ಮಾಡಿ ದೈಹಿಕ ಶಿಕ್ಷಕರು ಮರಳಿ ಬರುವಂತೆ ಮಾಡಿ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಶಿರವಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ತಮಗೆ ದೈಹಿಕ ಶಿಕ್ಷಕರು ಬೇಕು ಎಂದು ವಿವಿಧ ಸಂಘಟನಕಾರರ ಕಾಲಿಗೆ ಬಿದ್ದು ವಿದ್ಯಾರ್ಥಿಗಳು ಬೇಡಿಕೊಳ್ಳುತ್ತಿದ್ದಾರೆ. ದೈಹಿಕ ಶಿಕ್ಷಕರನ್ನು ವರ್ಗಾಯಿಸಿರುವುದನ್ನು ತಡೆಯುವಂತೆ ವಿವಿಧ ಸಂಘಟನೆಕಾರರ ಬಳಿ ಬಿಕ್ಕಿ, ಬಿಕ್ಕಿ ಅತ್ತು ಕೇಳಿಕೊಳ್ಳುತ್ತಿದ್ದಾರೆ. ತರಗತಿ ಬಹಿಷ್ಕರಿಸಿ ಶಾಲೆಯ ಬಳಿಯೂ ಪ್ರತಿಭಟನೆ ನಡೆಸುತ್ತಿದ್ದಾರೆ.  ಇದನ್ನು ಓದಿ: ಸರ್.. ಪ್ಲೀಸ್ ಹೋಗ್ಬೇಡಿ, ನಮ್ಮನ್ನ ಬಿಟ್ಟು ಹೋಗ್ಬೇಡಿ – ಶಿಕ್ಷಕನನ್ನು ಬಿಗಿದಪ್ಪಿ ವಿದ್ಯಾರ್ಥಿಗಳ ಕಣ್ಣೀರು

ತಾವಷ್ಟೇ ಪ್ರತಿಭಟನೆ ಮಾಡಿದರೆ ಸಾಕಾಗುವುದಿಲ್ಲ ಎಂಬುದನ್ನು ಅರಿತ ವಿದ್ಯಾರ್ಥಿಗಳು, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರನ್ನು ಭೇಟಿ ಮಾಡಿ, ಅವರ ಬಳಿ ತಮ್ಮ ಕಷ್ಟ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾತ್ರವಲ್ಲದೆ, ತರಗತಿಗೆ ತೆರಳದೆ, ಬೋರ್ಡ್ ಹಿಡಿದು ಶಾಲೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ನಮಗೆ ದೈಹಿಕ ಶಿಕ್ಷಕರು ಬೇಕು, ಹೇಗಾದರೂ ಮಾಡಿ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಮರಳಿ ಕರೆಸಿ ಎಂದು ಗೋಳಿಡುತ್ತಿದ್ದಾರೆ.

ವಿದ್ಯಾರ್ಥಿಗಳ ಮೊರೆಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದು, ಹೇಗಾದರೂ ಮಾಡಿ ವರ್ಗಾವಣೆಯನ್ನು ತಡೆಯುತ್ತೇವೆ. ನಿಮ್ಮ ದೈಹಿಕ ಶಿಕ್ಷಕರನ್ನು ಕರೆ ತರುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೂ ಸುಮ್ಮನಾಗದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಶಾಲೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *