ಮಹಿಳಾ ದಿನಾಚರಣೆಯಂದೇ ಸಿಡಿದೆದ್ದ ವಿದ್ಯಾರ್ಥಿನಿಯರು – ಕಾಲೇಜಿನ ಮೇಲೆಯೇ ಕಲ್ಲೆಸೆದ್ರು!

ಚಿಕ್ಕಬಳ್ಳಾಪುರ: ಯಾವುದೇ ಮಾಹಿತಿ ನೀಡದೇ ದಿಢೀರ್ ಆಗಿ ಕಾಲೇಜು ಕ್ಲೋಸ್ ಮಾಡಿದ ಆಡಳಿತ ಮಂಡಳಿ ವಿರುದ್ಧ ಮಹಿಳಾ ವಿದ್ಯಾರ್ಥಿಗಳು ಕಲ್ಲು ತೂರುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಗೌರಿಬಿದನೂರು ಪಟ್ಟಣ ಹೊರವಲಯದ ಇಡಗೂರು ಬಳಿ ನಡೆದಿದೆ.

ಪಟ್ಟಣದ ಖಾಸಗಿ ಹೈಟೆಕ್ ಪಾಲಿಟೆಕ್ನಿಕ್ ಸಂಸ್ಥೆಯ ಆಡಳಿತ ಮಂಡಳಿಯ ಭಿನ್ನಾಭಿಪ್ರಾಯ ಹಾಗೂ ಗಲಾಟೆಯಿಂದ ಏಕಾಏಕಿ ಡಿಪ್ಲೋಮಾ ಕಾಲೇಜು ಬಂದ್ ಆಗಿತ್ತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಇಂದು ಮಹಿಳಾ ದಿನಾಚರಣೆ ಬಿಟ್ಟು ತಾವು ಓದುತ್ತಿದ್ದ ಕಾಲೇಜಿನ ಮೇಲೆಯೇ ಕಲ್ಲು ತೂರಾಟ ನಡೆಸಿ ಕಾಲೇಜು ಕಟ್ಟಡದ ಕಿಟಕಿ ಗಾಜುಗಳು ಪುಡಿ-ಪುಡಿ ಮಾಡಿದ್ದಾರೆ.

ಏನಿದು ಘಟನೆ: ಗೌರಿಬಿದನೂರು ಪಟ್ಟಣದ ಹೊರವಲಯದಲ್ಲಿ ಇರುವ ಹೈಟೆಕ್ ಪಾಲಿಟೆಕ್ನಿಕ್ ಕಾಲೇಜು 2009 ರಲ್ಲಿ ಆರಂಭವಾಗಿತ್ತು. ಅಂದಿನಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು. ಪ್ರಸಕ್ತ ವರ್ಷದಲ್ಲಿ ಕಾಲೇಜಿನಲ್ಲಿ 91 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ಶಾಲೆಯ ಆಡಳಿತ ಮಂಡಳಿ ಸದಸ್ಯರ ನಡುವೆ ಹಣಕಾಸಿನ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಕಾರಣದಿಂದ ಕಾಲೇಜಿನ ಆಡಳಿತ ಮಂಡಳಿ ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆದು ಕಾಲೇಜು ನಡೆಸಲು ಸಾಧ್ಯವಾಗದ ಕಾರಣ ಮುಚ್ಚುವ ವಿಚಾರವನ್ನು ತಿಳಿಸಿದ್ದರು. ಪತ್ರವನ್ನು ಪಡೆದ ತಾಂತ್ರಿಕ ಶಿಕ್ಷಣ ಇಲಾಖೆ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಲೇಜು ಮುಚ್ಚುವುದು ಸೂಕ್ತ ಎಂಬ ಅಭಿಪ್ರಾಯವನ್ನು ನೀಡಿತ್ತು.

ಸಮಿತಿಯ ಅಭಿಪ್ರಾಯದಂತೆ ಆಡಳಿತ ಮಂಡಳಿ ಸದ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 91 ವಿದ್ಯಾರ್ಥಿಗಳಿಗೆ ಬೇರೆ ಕಾಲೇಜಿಗೆ ವರ್ಗಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಿತ್ತು. ಆದರೆ ಪರೀಕ್ಷೆಗೆ ಕೇವಲ ಒಂದು ತಿಂಗಳು ಬಾಕಿ ಇರುವ ಸಮಯದಲ್ಲಿ ಕಾಲೇಜಿನ ಆಡಳಿತ ಮಂಡಳಿ ನಿರ್ಧಾರ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಯ ಬೇರೆ ಪಾಲಿಟೆಕ್ನಿಕ್ ಕಾಲೇಜುಗಳಿಗೆ ವರ್ಗಾವಣೆ ಮಾಡಿಕೊಳ್ಳುವ ವೇಳೆಗೆ ಪರೀಕ್ಷಾ ಅವಧಿ ಹತ್ತಿರ ಬರುವುದರಿಂದ ವಿದ್ಯಾರ್ಥಿಗಳ ಹೆಚ್ಚು ಕಷ್ಟವಾಗಲಿದೆ. ಪರೀಕ್ಷೆಗೆ ಸಿದ್ಧವಾಗಬೇಕಿದ್ದ ನಾವು ಭವಿಷ್ಯದ ಬಗ್ಗೆ ಯೋಚನೆ ಮಾಡುವಂತಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=ZmxKMSJMBa4

Comments

Leave a Reply

Your email address will not be published. Required fields are marked *