ಮಕ್ಕಳ ಜಗಳಕ್ಕೆ ಶಾಲೆಯ ಆವರಣದಲ್ಲೇ ಚಪ್ಪಲಿ, ಕಲ್ಲಿನಿಂದ ಹೊಡೆದಾಡಿಕೊಂಡ ಮಹಿಳೆಯರು! -ವಿಡಿಯೋ

ಕಾರವಾರ: ಮಕ್ಕಳ ಜಗಳಕ್ಕೆ ಪೋಷಕರು ಮೂಗು ತೂರಿಸಿ ಶಾಲೆಯಲ್ಲಿಯೇ ಒಬ್ಬರಿಗೊಬ್ಬರು ಚಪ್ಪಲಿ, ಕಲ್ಲು ಎಸೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡದ ಗಾಬೀತವಾಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಕಳೆದ ಮೂರು ದಿನದ ಹಿಂದೆ ಗಾಬೀತವಾಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯ ಮಕ್ಕಳ ನಡುವೆ ಗಲಾಟೆ ನಡೆದಿತ್ತು. ಬುಧವಾರ ಶಾಲೆ ಬಿಟ್ಟ ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡ ವಿದ್ಯಾರ್ಥಿಯ ತಾಯಿ ಸುರೇಖಾ ಎಂಬುವವಳು ಮತ್ತೊಬ್ಬ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.

ಈ ಘಟನೆ ಊರಿನಲ್ಲಿ ಸದ್ದು ಮಾಡಿದ್ದು, ವಿಷಯ ತಿಳಿದ ಗ್ರಾಮದ ಪ್ರಮುಖರು ಚಪ್ಪಲಿಯಿಂದ ಹೊಡೆಸಿಕೊಂಡ ವಿದ್ಯಾರ್ಥಿ ಹಾಗೂ ಆಕೆಯ ತಾಯಿ ಕಾಂಚನ ಎಂಬುವವರೊಂದಿಗೆ ಶಾಲೆಗೆ ತೆರಳಿ ಘಟನೆ ಕುರಿತು ಶಿಕ್ಷಕರಿಗೆ ಪ್ರಶ್ನೆ ಮಾಡಿದ್ದಾರೆ.

ಘಟನೆ ಕುರಿತು ಶಾಲೆಯ ಎಸ್‍ಡಿಎಂಸಿ ಪೋಷಕರ ಸಭೆ ಕರೆದಿದ್ದು, ಈ ವೇಳೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಸುರೇಖಾ ಚೀಲದಲ್ಲಿ ಕಲ್ಲು ತುಂಬಿಕೊಂಡು ಬಂದಿದ್ದಾರೆ. ಸಭೆಯಲ್ಲಿ ಈಕೆಯ ವರ್ತನೆಯನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಒತ್ತಾಯಿಸಲಾಗಿತ್ತು. ಇದಕ್ಕೆ ಒಪ್ಪದ ಈಕೆ ಕುಪಿತಗೊಂಡು ಚೀಲದಲ್ಲಿ ತುಂಬಿಕೊಂಡು ಬಂದಿದ್ದ ಕಲ್ಲಿನಿಂದ ಸಭೆಗೆ ಬಂದ ಪೋಷಕರ ಮೇಲೆ ಏರ್ರಾಬಿರ್ರಿ ಕಲ್ಲು ತೂರಲು ಆರಂಭಿಸಿದಳು.

ಇದರಿಂದಾಗಿ ಸಭೆಗೆ ಸೇರಿದ್ದ ಪೋಷಕರಿಗೂ ಸಿಟ್ಟು ಬಂದಿದ್ದು ರೊಚ್ಚಿಗೆದ್ದ ಕೆಲವು ಮಹಿಳೆಯರು ಈಕೆಗೂ ಗೂಸ ಕೊಟ್ಟಿದ್ದು ದೊಡ್ಡ ಕದನವೇ ನಡೆದಿದೆ. ಘಟನೆಯ ತೀವ್ರತೆ ಅರಿತ ಶಾಲೆಯ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪೊಲೀಸರು ಶಾಂತಿ ಸಂಧಾನ ನಡೆಸಿ ಗಲಾಟೆ ನಡೆಸಿದ ಸುರೇಖಾರಿಂದ ಮುಚ್ಚಳಿಕೆಯನ್ನು ಬರೆಸಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.

ಚಿಕ್ಕ ಮಕ್ಕಳ ಜಗಳಕ್ಕೆ ದೊಡ್ಡವರು ಎನಿಸಿಕೊಂಡವರು ಮೂಗು ತೂರಿಸಿ ಶಾಲೆಯಲ್ಲಿ ಮಕ್ಕಳ ಮುಂದೆಯೇ ಕಲ್ಲು, ಚಪ್ಪಲಿ ತೂರಾಟ ಮಾಡಿಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಗಲಾಟೆ ಮಾಡಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಸದ್ಯ ಮಹಿಳೆಯರ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://www.youtube.com/watch?v=0ZtHZp-d3fs

 

Comments

Leave a Reply

Your email address will not be published. Required fields are marked *