ಶಿಕ್ಷಕನ ದಿಢೀರ್ ವರ್ಗಾವಣೆ- ಮನಕಲಕುವಂತಿದೆ ಮಕ್ಕಳ ರೋಧನ

ಚಾಮರಾಜನಗರ: ನೆಚ್ಚಿನ ಶಿಕ್ಷಕ ದಿಢೀರ್ ವರ್ಗಾವಣೆ ಆಗಿರುವುದನ್ನು ತಿಳಿದ ಶಾಲಾ ಮಕ್ಕಳು ರೋಧಿಸಿ ಪ್ರತಿಭಟನೆ ನಡೆಸಿರುವ ಘಟನೆ ಹನೂರು ತಾಲೂಕಿನ ಮೀಣ್ಯಂನಲ್ಲಿ ನಡೆದಿದೆ.

ಶಿಕ್ಷಕ ಪಿ. ಮಹಾದೇವಸ್ವಾಮಿ ಎಂಬವರನ್ನು ಮೀಣ್ಯಂ ಶಾಲೆಯಿಂದ ಲೊಕ್ಕನಹಳ್ಳಿ ಶಾಲೆಗೆ ದಿಢೀರ್ ನಿಯೋಜಿಸಲಾಗಿತ್ತು. ಈ ವಿಚಾರ ತಿಳಿದ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರು ಬೇಕೆ ಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರು ಇದಕ್ಕೆ ದನಿಗೂಡಿಸಿದ್ದಾರೆ. ತಮ್ಮ ಶಾಲೆಗೆ ಮತ್ತೆ ಮಹಾದೇವಸ್ವಾಮಿ ನಿಯೋಜನೆ ಆಗದಿದ್ದರೇ ಶನಿವಾರದಿಂದ ಯಾರೂ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಎಚ್ಚರಿಸಿದ್ದು ಗ್ರಾಮಸ್ಥರು ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

ವರ್ಗಾವಣೆಯಾದ ಪಿ. ಮಹಾದೇವಸ್ವಾಮಿ ಕಳೆದ 4 ವರ್ಷದಿಂದ ಮೀಣ್ಯಂ ಶಾಲೆಯಲ್ಲಿದ್ದು ಕನ್ನಡ, ಇಂಗ್ಲಿಷ್ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರಿಂದ ಅದರ ಜವಾಬ್ದಾರಿಯನ್ನು ಹೊತ್ತಿದ್ದರು. ಇದರೊಟ್ಟಿಗೆ ಬಿಸಿಯೂಟದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಮಕ್ಕಳಿಗೆ ಶುಚಿ-ರುಚಿಯಾದ ಬಿಸಿಯೂಟ ಸಿಗುವಂತೆ ಮಾಡಿದ್ದರು ಎಂದು ಗ್ರಾಮಸ್ಥರಾದ ಮಾದೇಶ್ ತಿಳಿಸಿದ್ದಾರೆ.

ಶನಿವಾರ ಇಲ್ಲವೇ ಸೋಮವಾರ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಪಿ. ಮಹಾದೇವಸ್ವಾಮಿ ಅವರ ಎತ್ತಂಗಡಿಯಲ್ಲಿ ಮುಖ್ಯ ಶಿಕ್ಷಕ ಬಾಲು ನಾಯ್ಕ್ ಎಂಬವರು ಪ್ರಭಾವ ಬೀರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಶನಿವಾರ ಇಲ್ಲವೇ ಭಾನುವಾರ ಪ್ರತಿಭಟನೆ ನಡೆಸಿ ಶಿಕ್ಷಕರನ್ನು ಪುನರ್ ನಿಯೋಜಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿದು ಬಂದಿದೆ. ಶಿಕ್ಷಣ ಸಚಿವರ ಭೇಟಿ ವೇಳೆ ಶಾಲಾ ಮುಖ್ಯ ಶಿಕ್ಷಕ ಬಾಲು ನಾಯ್ಕ ವರ್ಗಾವಣೆ ಆಗ್ರಹಿಸಿ ಸಚಿವರಿಗೆ ಮನವಿ ಪತ್ರ ನೀಡುವ ಜೊತೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದರು.

Comments

Leave a Reply

Your email address will not be published. Required fields are marked *