ಕೊಡಗಿನ 61 ಶಾಲೆಗಳಿಗೆ ಹೋಗುವಂತಿಲ್ಲ, 76 ರಿಪೇರಿಯಾಗಬೇಕಿದೆ: ಎನ್.ಮಹೇಶ್

ಮಡಿಕೇರಿ: ಕೊಡಗಿನಲ್ಲಿ 61 ಹೆಚ್ಚಿನ ಶಾಲೆಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 76 ಶಾಲೆಗಳು ರಿಪೇರಿಯಾಗಬೇಕಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ 61 ಕ್ಕೂ ಹೆಚ್ಚಿನ ಶಾಲೆಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 61 ಶಾಲೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಶಾಲೆಗಳು ಪ್ರಾರಂಭವಾಗಲಿದೆ. ಶಾಲೆಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಹತ್ತಿರದ ಬೇರೆ ಶಾಲೆಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗುತ್ತಿದೆ. ಪರಿಹಾರ ಕೇಂದ್ರಗಳಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಣ ನಡೆಸುವಂತೆ ಸೂಚಿಸಿದ್ದೇನೆ. ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಸಹ ನಡೆಸಲಾಗುತ್ತದೆ. ಇನ್ನು ಎರಡು-ಮೂರು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಣೆಯನ್ನು ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.

ಪ್ರವಾಹದಿಂದಾಗಿ ಶಾಲೆಗಳ ದುರಸ್ಥಿ ಕಾರ್ಯ ಸವಾಲಿನ ಕೆಲಸವಾಗಿದೆ. ಜಿಲ್ಲೆಯ ಎಲ್ಲಾ ಶಾಲೆಗಳ ದುರಸ್ಥಿಗೆ ಒಟ್ಟು 4 ಕೋಟಿ ರೂಪಾಯಿಯ ಅಗತ್ಯವಿದೆ. ಇದಕ್ಕೆ ಸ್ಪಂದಿಸಿರುವ ಎಲ್ಲಾ ಜಿಲ್ಲೆಗಳ ಶಿಕ್ಷಕರುಗಳ ತಮ್ಮ ಒಂದು ದಿನದ ಸಂಬಳವನ್ನು ಸರ್ಕಾರಕ್ಕೆ ನೀಡಲಿದ್ದಾರೆ. ಇದರಿಂದಾಗಿ ಒಟ್ಟು ಸುಮಾರು 100 ಕೋಟಿ ರೂಪಾಯಿಯಷ್ಟು ಹಣ ಕ್ರೋಢಿಕೃತವಾಗುತ್ತದೆ. ಅದರಲ್ಲಿ 4 ಕೋಟಿ ರೂಪಾಯಿಯನ್ನು ಶಿಕ್ಷಣ ಕ್ಷೇತ್ರದ ದುರಸ್ಥಿಗಾಗಿ ಬಳಸಿಕೊಂಡು, ಉಳಿದ ಮೊತ್ತವನ್ನು ಕೊಡಗು ಅಭಿವೃದ್ಧಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರವಾಹದಿಂದಾಗಿ ಸಾವಿರಾರು ನಿರಾಶ್ರಿತರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಬೇಕು. ಮನೆ ನಿರ್ಮಾಣ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಿರಾಶ್ರಿತರು ಯಾವುದೇ ಸ್ತ್ರೀ-ಶಕ್ತಿ ಸಂಘದ ಸಾಲದ ಬಗ್ಗೆ ಚಿಂತೆ ಮಾಡಬೇಡಿ, ಉದ್ಯೋಗ ಖಾತ್ರಿ ಯೋಜನೆ ಮೂಲಕ ಉದ್ಯೋಗ ಸೃಷ್ಟಿಮಾಡಲು ಯೋಚಿಸಿದ್ದೇವೆ ಎಂದು ನಿರಾಶ್ರಿತರಿಗೆ ಅಭಯಹಸ್ತ ನೀಡಿದರು.

ಈ ಹಿಂದೆ ನಾನು ಸಹ ಕೊಡಗಿನಲ್ಲಿ ಕೆಲಸ ಮಾಡಿದ್ದೇನೆ. ಆದರೆ ನನ್ನ ಅವಧಿಯಲ್ಲಿ ಇಂತಹ ಮಳೆಯನ್ನೇ ನೋಡಿರಲಿಲ್ಲವೆಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *