ಸುಷ್ಮಾ ಖಡಕ್ ಮಾತಿಗೆ ಕಾಶ್ಮೀರ ಯುವಕನ ಲೊಕೇಶನ್ ಚೇಂಜ್- ಟ್ವೀಟ್ ವೈರಲ್

ನವದೆಹಲಿ: `ಭಾರತ ಆಕ್ರಮಿತ ಜಮ್ಮು ಕಾಶ್ಮೀರ’ ಎಂದು ಟ್ವಿಟ್ಟರ್ ನಲ್ಲಿ ಲೋಕೆಷನ್ ಹಾಕಿದ್ದ ಜಮ್ಮುವಿನ ಯುವಕನಿಗೆ ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಟಾಂಗ್ ನೀಡಿ ಇಂತಹ ಪ್ರದೇಶವೇ ಇಲ್ಲ ಎಂದು ಉತ್ತರಿಸಿದ್ದಾರೆ.

ಜಮ್ಮುವಿನ ಶೇಕ್ ಅತೀಕ್ ಯುವಕ ಫಿಲಿಪೈನ್ಸ್ ನಿಂದ ಸುಷ್ಮಾ ಸ್ವರಾಜ್ ಅವರ ಸಹಾಯ ಕೇಳಿ ಟ್ವೀಟ್ ಮಾಡಿದ್ದ. ಈ ಟ್ವೀಟ್ ಗೆ ಉತ್ತರಿಸಿದ ಅವರು, ನೀವು ಜಮ್ಮು ಕಾಶ್ಮೀರದ ವ್ಯಕ್ತಿಯಾಗಿದ್ದರೆ ಖಂಡಿತ ನಾವು ಸಹಾಯ ಮಾಡುತ್ತೇವೆ. ಆದ್ರೆ ನಿಮ್ಮ ಪ್ರೊಫೈಲ್ ನಲ್ಲಿ ನೀವು `ಭಾರತ ಆಕ್ರಮಿತ ಪ್ರದೇಶದ’ ವ್ಯಕ್ತಿ ಎಂದು ಬರೆದುಕೊಂಡಿದ್ದೀರಿ. ಆದರೆ ಅಂತಹ ಪ್ರದೇಶವೇ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಹಾಯ ಕೇಳಿದ್ದು ಯಾಕೆ?
ಜಮ್ಮುವಿನ ಶೇಕ್ ಅತೀಕ್ ನಾನು ಫಿಲಿಪೈನ್ಸ್ ನಲ್ಲಿ ಮೆಡಿಕಲ್ ಮಾಡುತ್ತಿದ್ದೇನೆ. ನನ್ನ ಪಾಸ್‍ಪೋರ್ಟ್ ಸಮಸ್ಯೆ ಎದುರಾಗಿದೆ. ಕಳೆದ ಒಂದು ತಿಂಗಳ ಹಿಂದೆಯೇ ತಾನು ಹೊಸ ಪಾಸ್‍ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ. ಈ ಕುರಿತು ಸಹಾಯ ಮಾಡಿ. ಆರೋಗ್ಯ ಸಮಸ್ಯೆಯ ಪರೀಕ್ಷೆಗಾಗಿ ತಾನು ತವರಿಗೆ ಮರಳಬೇಕಿದೆ ಎಂದು ಏಪ್ರಿಲ್ 5 ರಂದು ಟ್ವೀಟ್ ಮಾಡಿ ಮನವಿ ಮಾಡಿದ್ದ.

ಸದಾ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಸಮಸ್ಯೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಸುಷ್ಮಾ ಸ್ವರಾಜ್ ಅವರು ಶೇಕ್‍ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಅವರ ಟ್ವೀಟ್ ಬಳಿಕ ಶೇಕ್ ಅತೀಕ್ ಎಚ್ಚೆತ್ತು ತಕ್ಷಣ ತನ್ನ ಟ್ವಿಟ್ಟರ್ ನಲ್ಲಿ ಲೋಕೆಷನ್ ಬದಲಾಯಿಸಿ ಜಮ್ಮು ಕಾಶ್ಮೀರದ ಮಲೀನಾ ಎಂದು ಎಡಿಟ್ ಮಾಡಿದ್ದಾನೆ.

ಯುವಕ ತನ್ನ ತಪ್ಪು ಸರಿಪಡಿಸಿಕೊಂಡ ಬಳಿಕ ಸುಷ್ಮಾ ಸ್ವರಾಜ್ ಮತ್ತೊಂದು ಟ್ವೀಟ್ ಮಾಡಿ ನಿಮ್ಮ ಪ್ರೊಫೈಲ್ ಸರಿ ಮಾಡಿದ್ದು ನನಗೆ ಸಂತೋಷ ತಂದಿದೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸದ್ಯ ಸುಷ್ಮಾ ಸ್ವರಾಜ್ ಅವರ ಎರಡು ಟ್ವೀಟ್ ಗಳು ಸುಮಾರು 5 ಸಾವಿರಕ್ಕೂ ಹೆಚ್ಚು ಶೇರ್ ಆಗಿದ್ದು, 10 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಸುಷ್ಮಾ ಸ್ವರಾಜ್ ಅವರ ಟ್ವೀಟ್ ವೈರಲ್ ಆಗುತ್ತಿದಂತೆ ಶೇಕ್ ಅತೀಕ್ ತನ್ನ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ.

 

 

Comments

Leave a Reply

Your email address will not be published. Required fields are marked *