ವಿಕೃತಗೊಳಿಸಿದ ವಿಡಿಯೋ ಟಿಕ್ ಟಾಕ್‍ಗೆ ಅಪ್ಲೋಡ್ – ವಿದ್ಯಾರ್ಥಿ ಅರೆಸ್ಟ್

– ಭದ್ರತೆ ಕುರಿತು ಮಾಹಿತಿ ನೀಡಲು ಟಿಕ್ ಟಾಕ್‍ಗೂ ನೋಟಿಸ್

ಅಜಮ್‍ಘರ್: ಇಬ್ಬರು ಸಹೋದರಿಯರ ವಿಡಿಯೋಗಳನ್ನು ವಿಕೃತಗೊಳಿಸಿ ಟಿಕ್ ಟಾಕ್ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿದ್ದಕ್ಕಾಗಿ 12ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಕೃತಗೊಳಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಸಂತ್ರಸ್ತರು ಆಶ್ಚರ್ಯಗೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪಂಕಜ್ ಸಾಹ್ನಿ(18) ಎಂದು ಗುರಗುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಮ್‍ಘರ್ ಪೊಲೀಸರು ಪಂಕಜ್‍ನನ್ನು ವಿಚಾರಣೆ ನಡೆಸಿದ್ದು, ಮದುವೆಯಲ್ಲಿ ಪಾಲ್ಗೊಂಡಾಗ ಸಂತ್ರಸ್ತರನ್ನು ಭೇಟಿಯಾಗಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ವಿಚಾರಣೆ ವೇಳೆ ನಕಲಿ ಟಿಕ್ ಟಾಕ್ ಹಾಗೂ ಫೇಸ್ಬುಕ್ ಖಾತೆಯಿಂದ ಈ ವಿಡಿಯೋಗಳನ್ನು ಅಪ್‍ಲೋಡ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸಾಮಾಜಿಕ ಮಾಧ್ಯಮದ ಗೌಪ್ಯತೆ ಹಾಗೂ ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದ ಆಧಾರದ ಮೇಲೆ ಪಂಕಜ್‍ನನ್ನು ಬಂಧಿಸಲಾಗಿದೆ.

ಈ ಕುರಿತು ಅಜಮ್‍ಘರ್ ಪೊಲೀಸ್ ವರಿಷ್ಠಾಧಿಕಾರಿ ತ್ರೀವೇಣಿ ಸಿಂಗ್ ಅವರು ಮಾಹಿತಿ ನೀಡಿ, ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್‍ಗೂ ನೋಟಿಸ್ ಕಳುಹಿಸಿದ್ದೇವೆ. ಟಿಕ್ ಟಾಕ್‍ನವರು ಅಪರಾಧ ಚಟುವಟಿಕೆಗಳನ್ನು ಹೇಗೆ ಪರಿಶೀಲಿಸುತ್ತಾರೆ ಎಂಬುದರ ಕುರಿತು ವಿವರ ಕಲೆ ಹಾಕುತ್ತಿದ್ದೇವೆ. ಆಕ್ಷೇಪಾರ್ಹ ಹಾಗೂ ಅಶ್ಲೀಲ ವಿಷಯವನ್ನು ಅಪ್‍ಲೋಡ್ ಮಾಡಲು ಹೇಗೆ ಅನುಮತಿ ನೀಡುತ್ತಾರೆ, ಯಾಕೆ ಈ ಕುರಿತು ಕ್ರಮ ಕೈಗೊಂಡಿಲ್ಲ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಟಿಕ್ ಟಾಕ್‍ನಲ್ಲಿ ಅಪ್‍ಲೋಡ್ ಮಾಡುವ ವಿಡಿಯೋಗಳ ಕುರಿತು ಹಾಗೂ ಅಪರಾಧ ಕೃತ್ಯಗಳ ಕುರಿತು ಕಂಪನಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ಕೇಳಿದ್ದೇವೆ. ಐಟಿ ಕಾಯ್ದೆ 2009ರ ಸೆಕ್ಷನ್ 3(2)(ಸಿ) ಹಾಗೂ ಸೆಕ್ಷನ್ 85 ಅಡಿ ಟಿಕ್ ಟಾಕ್‍ಗೆ ಏಕೆ ದಂಡ ವಿಧಿಸಬಾರದು ಎಂದು ವಿವರಣೆ ನೀಡುವಂತೆ ಕೋರಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಭಾರತ ವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಟಿಕ್ ಟಾಕ್ ಬಳಸಲಾಗುತ್ತಿದೆ ಎಂಬ ಆತಂಕಗಳಿವೆ. ಈ ಕುರಿತು ಸ್ಪಂದಿಸುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸೈಬರ್ ಕಾನೂನು ಮತ್ತ ಇ-ಸೆಕ್ಯೂರಿಟಿ ವಿಭಾಗ ಟಿಕ್ ಟಾಕ್ ಆ್ಯಪ್‍ಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ.

Comments

Leave a Reply

Your email address will not be published. Required fields are marked *