ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು (Pahalgam Terror Attack) ಬೆಂಬಲಿಸಿ ಪೋಸ್ಟ್‌ ಹಾಕಿದ್ದ ನಿವೃತ್ತ ಶಿಕ್ಷಕ, ವಕೀಲ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ 19 ಜನರನ್ನು ಬಂಧಿಸಲಾಗಿದೆ.

ಅಸ್ಸಾಂನ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನ ಶಾಸಕ ಅಮೀನುಲ್ ಇಸ್ಲಾಂ ಅವರನ್ನು ಗುರುವಾರ ಬಂಧಿಸಲಾಗಿತ್ತು. ಅವರು, 2019ರ ಪುಲ್ವಾಮಾ ದಾಳಿ ಮತ್ತು ಪಹಲ್ಗಾಮ್ ದಾಳಿಯು ಕೇಂದ್ರ ಸರ್ಕಾರದ ಪಿತೂರಿ ಎಂದು ಆರೋಪಿಸಿದ್ದರು. ಅವರನ್ನು ಬಂಧಿಸಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಪಹಲ್ಗಾಮ್‌ ಉಗ್ರರ ದಾಳಿ – NIA ಹೆಗಲಿಗೆ ತನಿಖೆಯ ಹೊಣೆ

ಶುಕ್ರವಾರದವರೆಗೆ ಅಸ್ಸಾಂನಲ್ಲಿ ಬಂಧಿಸಲಾದ ಇತರರಲ್ಲಿ ಹೈಲಕಂಡಿಯ ಎಂಡಿ ಜಬೀರ್ ಹುಸೇನ್, ಸಿಲ್ಚಾರ್‌ನ ಎಂಡಿ ಎಕೆ ಬಹಾವುದ್ದೀನ್ ಮತ್ತು ಎಂಡಿ ಜಾವೇದ್ ಮಜುಂದಾರ್, ಮೋರಿಗಾಂವ್‌ನ ಎಂಡಿ ಮಹಾಹರ್ ಮಿಯಾ ಮತ್ತು ಶಿವಸಾಗರ್‌ನ ಎಂಡಿ ಸಾಹಿಲ್ ಅಲಿ ಸೇರಿದ್ದಾರೆ. ಕರೀಂಗಂಜ್‌ನ ಎಂಡಿ ಮುಸ್ತಾ ಅಹ್ಮದ್ ಅಲಿಯಾಸ್ ಸಹೇಲ್ ಶುಕ್ರವಾರ ರಾತ್ರಿ ಫೇಸ್‌ಬುಕ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪೋಸ್ಟ್ ಮಾಡಿದ್ದ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ಹುಸೇನ್ ಪತ್ರಕರ್ತನಾಗಿದ್ದಾನೆ. ಬಹಾವುದ್ದೀನ್ ಸಿಲ್ಚಾರ್‌ನಲ್ಲಿರುವ ಅಸ್ಸಾಂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಾನೆ. ಮಜುಂದಾರ್ ವಕೀಲನಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಎಂಡಿ ಜರೀಫ್ ಅಲಿ ಮತ್ತು ವಿದ್ಯಾರ್ಥಿ ಸಂಘಟನೆಯಾದ ಸತ್ರ ಮುಕ್ತಿ ಸಂಗ್ರಾಮ್ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಅನಿಲ್ ಬನಿಯಾನನ್ನು ಶನಿವಾರ ಬಿಸ್ವಾನಾಥ್‌ನಲ್ಲಿ ಬಂಧಿಸಲಾಗಿತ್ತು. ಸುಮನ್ ಮಜುಂದಾರ್ ಅಲಿಯಾಸ್ ಬುಲ್ಬುಲ್ ಅಲೋಮ್ ಮಜುಂದಾರ್‌ನನ್ನು ಹೈಲಕಂಡಿಯಲ್ಲಿ, ಮಶುದ್ ಅಜರ್‌ನನ್ನು ನಾಗಾಂವ್‌ನಲ್ಲಿ ಮತ್ತು ಗುವಾಹಟಿ ಬಳಿಯ ಹಜೋದಿಂದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇವರೆಲ್ಲ ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಕಾಮೆಂಟ್‌ಗಳನ್ನು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತ್ರಿಪುರದಲ್ಲಿ ಇಬ್ಬರು ನಿವೃತ್ತ ಶಿಕ್ಷಕರನ್ನು ಒಳಗೊಂಡಂತೆ ಇಲ್ಲಿಯವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಮೇಘಾಲಯದಲ್ಲಿ, ಗುವಾಹಟಿಯ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ವೀಡಿಯೊಗೆ ದೇಶ ವಿರೋಧಿ ಕಾಮೆಂಟ್ ಮಾಡಿದವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ದೇಶದಲ್ಲಿ ಇದುವರೆಗೂ ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ ಹಾಗೂ ಕಾಮೆಂಟ್‌ ಮಾಡಿದ 19 ಜನರ ಬಂಧನವಾಗಿದೆ.

ಅಗತ್ಯವಿದ್ದರೆ ಬಂಧಿತರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ನಿಬಂಧನೆಗಳನ್ನು ಹೇರುತ್ತೇವೆ. ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆ ಉಡೀಸ್!