11ನೇ ತರಗತಿ ವಿದ್ಯಾರ್ಥಿ ಮೇಲೆ ಪ್ರಾಂಶುಪಾಲ ಸೇರಿ, ಮೂವರು ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ

– ಮೊಬೈಲ್ ಇಟ್ಟುಕೊಂಡಿದ್ದಕ್ಕೆ ಬಟ್ಟೆ ಬಿಚ್ಚಿಸಿ ಅವಮಾನ

ಚೆನ್ನೈ: 11ನೇ ತರಗತಿ ವಿದ್ಯಾರ್ಥಿ ಮೇಲೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಮೂವರು ಶಿಕ್ಷಕರು ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೇಂದ್ರೀಯ ವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯ ಹೇಳಿಕೆ ಮೇರೆಗೆ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ಮೂವರೂ ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊಬೈಲ್ ಫೋನ್ ಇಟ್ಟುಕೊಂಡಿದ್ದಕ್ಕಾಗಿ ವಿದ್ಯಾರ್ಥಿಯನ್ನು ಮನಬಂದಂತೆ ಹೊಡೆದಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಕೊಯಮತ್ತೂರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಾನು ತರಗತಿಯಲ್ಲಿ ಕುಳಿತಾಗ ಮೊಬೈಲ್ ಇರುವುದನ್ನು ಹುಡುಕಬೇಕು ಹೊರಗೆ ಬಾ ಎಂದು ಕರೆದಿದ್ದಾರೆ. ನಂತರ ನನ್ನ ಬಟ್ಟೆ ಬಿಚ್ಚಿ ಮೊಬೈಲ್ ಹುಡುಕಿದ್ದಾರೆ. ನನ್ನ ಬಳಿ ಮೊಬೈಲ್ ಇರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

ಈ ಘಟನೆ ನಂತರ ಪ್ರಾಂಶುಪಾಲರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಈ ಮೂವರು ಆರೋಪಿಗಳು ನನ್ನ ತಮ್ಮನ ಮೇಲೆ ಸಹ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಅಲ್ಲದೆ ಶಿಕ್ಷಕರ ವಿರುದ್ಧ ದೂರು ನೀಡಲು ತೆರಳಿದಾಗ ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.

ಆದರೆ ಸಂತ್ರಸ್ತ ಮಾಡಿರುವ ಆರೋಪವನ್ನು ಪ್ರಾಂಶುಪಾಲರು ಅಲ್ಲಗಳೆದಿದ್ದು, ನಾವು ವಿದ್ಯಾರ್ಥಿ ಪರಿಷತ್ ಸದಸ್ಯರನ್ನು ಹೊಂದಿದ್ದೇವೆ. ಅವರು 9-12ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳು ತರಗತಿಗಳಲ್ಲಿ ಮೊಬೈಲ್ ಬಳಸುತ್ತಿರುವುದನ್ನು ಪರಿಶೀಲಿಸುವಂತೆ ಹೇಳಿದರು. ಅಲ್ಲದೆ ಹುಡುಗಿಯರು ಈ ಕುರಿತು ದೂರು ನೀಡಿದ್ದು, ಕೆಲ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಪೆನ್ ಕ್ಯಾಮೆರಾಗಳನ್ನು ಬಳಸಿ ವಿಡಿಯೋ ಮಾಡುತ್ತಾರೆ ಎಂದು ದೂರು ನೀಡಿದ್ದರು. ಹೀಗಾಗಿ ಪರಿಷತ್ತಿನ ಸದಸ್ಯರು ಪರಿಶೀಲನೆ ಕಾರ್ಯ ನಡೆಸಿದರು. ಆಗ ವಿದ್ಯಾರ್ಥಿ ಬಳಿ ಮೊಬೈಲ್ ಇರುವುದನ್ನು ಕಂಡು ಬಂದಿದ್ದು, ಆತನನ್ನು 9 ದಿನಗಳ ಕಾಲ ಅಮಾನತುಗೊಳಿಸಿದ್ದೆವು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಮೂವರು ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯ ಸೆಕ್ಷನ್ 7(ಲೈಂಗಿಕ ಹಲ್ಲೆ), 8(ಲೈಂಗಿಕ ಹಲ್ಲೆಯ ಶಿಕ್ಷೆ), ಅಲ್ಲದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷೆನ್ 66ಇ ಹಾಗೂ ಐಪಿಸಿ ಸೆಕ್ಷನ್ 506(ಐ)(ಅಪರಾಧ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *