ಸ್ಕೇಲ್‍ನಿಂದ ಹೊಡೆದ ಟೀಚರ್- ವಿದ್ಯಾರ್ಥಿ ಕಣ್ಣಿನ ದೃಷ್ಟಿಯೇ ಹೋಯ್ತು!

ಚಾಮರಾಜನಗರ: ಮುಖ್ಯ ಶಿಕ್ಷಕ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ನಡೆದಿರುವುದಾಗಿ ವಿದ್ಯಾರ್ಥಿಯ ಪೋಷಕರು ಆರೋಪಿಸುತ್ತಿದ್ದಾರೆ.

ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್, ಗಿರಿಮಲ್ಲೇಶ್ ಎಂಬ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದಿದ್ದಾರೆ. ಹೊಡೆಯುವ ವೇಳೆ ವಿದ್ಯಾರ್ಥಿಯ ಎಡಗಣ್ಣಿಗೆ ತಾಗಿ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಕಳೆದ ಜನವರಿಯಲ್ಲಿ ಶಾಲೆಯ ಸಮಯದಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ಮೂಲಕ ಹೊಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ಬಿದ್ದ ಕಾರಣ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದಾದ ನಂತರ ವಿದ್ಯಾರ್ಥಿ ತನಗೆ ಯಾವುದೇ ನೋವಾಗಿಲ್ಲ ಎಂದು ತಿಳಿದುಕೊಂಡಿದ್ದಾನೆ.

ಇದೀಗ ವಿದ್ಯಾರ್ಥಿಗೆ ಕಣ್ಣಿನ ನೋವು ಕಾಡುತ್ತಿದ್ದ ಕಾರಣ ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ ಹೀಗಾಗಿ ಇತನ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಗಿರಿಮಲ್ಲೇಶ್‍ನನ್ನು ಪೋಷಕರು ವಿಚಾರಿಸಿದಾಗ ಐದು ತಿಂಗಳ ಹಿಂದೆ ಶಾಲೆಯಲ್ಲಿ ಹೀಗೆ ಆಗಿದೆ ಎಂದು ಹೇಳಿದ್ದಾನೆ.

ಈ ಬಗ್ಗೆ ಗಿರಿಮಲ್ಲೇಶ್ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದ್ದನ್ನು ಒಪ್ಪಿಕೊಳ್ಳದ ಶಾಲೆ ಆಡಳಿತ ಮಂಡಳಿ ಮುಖ್ಯ ಶಿಕ್ಷಕ ಯುಸೇಫ್‍ರನ್ನು 10 ದಿನಗಳ ರಜೆ ಮೇಲೆ ಕಳುಹಿಸಲಾಗಿದೆ. ಸದ್ಯ ಗಿರಿಮಲ್ಲೇಶ್ ತಮಿಳುನಾಡಿನ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಕುರಿತು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *