ಹೆತ್ತವರ ಪಾದ ಪೂಜೆ ಮಾಡಿ ಹೊಸ ವರ್ಷ ಆಚರಿಸಿದ ವಿದ್ಯಾರ್ಥಿಗಳು

ಶಿವಮೊಗ್ಗ: ಜಿಲ್ಲೆಯ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಇರುವ ಎಲ್ಲಾ ವಿದ್ಯಾರ್ಥಿಗಳೂ ಪೋಷಕರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆಯುವ ಮೂಲಕ ಹೊಸ ವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ.

ಹೊಸ ವರ್ಷಾಚರಣೆಯನ್ನು ಹಲವೆಡೆ ವಿಧ ವಿಧವಾಗಿ ಆಚರಿಸಿ ಸಂಭ್ರಮಿಸುತ್ತಾರೆ. ಆದ್ರೆ ಹೊಸ ವರ್ಷವನ್ನು ಶಿವಮೊಗ್ಗದ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನಡೆಸುವ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯವರು ವಿಭಿನ್ನವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕಳೆದ 14 ವರ್ಷಗಳಿಂದ ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಎಲ್ಲಾ ವಿದ್ಯಾರ್ಥಿಗಳು ಅವರ ಪೋಷಕರಿಗೆ ಪಾದ ಪೂಜೆ ಮಾಡಿ ಗೌರವಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸೋದು ವಾಡಿಕೆ. ಈ ಸಂಪ್ರದಾಯವನ್ನು ಈ ವರ್ಷವೂ ಸಂಸ್ಥೆ ಯಶಸ್ವಿಯಾಗಿ ನಡೆಸಿದೆ.

ಶಿವಮೊಗ್ಗದ ಅನುಪಿನ ಕಟ್ಟೆಯಲ್ಲಿ ಇರುವ ಈ ಶಾಲೆಯಲ್ಲಿ ಇಂದು 600ಕ್ಕೂ ಹೆಚ್ಚು ಮಕ್ಕಳು ತಮ್ಮ ಪೋಷಕರ ಪಾದ ಪೂಜೆ ಮಾಡಿ ಸಾರ್ಥಕ ಮನೋಭಾವ ವ್ಯಕ್ತಪಡಿಸಿದರು. ತಂದೆ-ತಾಯಿ ಮಕ್ಕಳ ಪಾಲಿಗೆ ಕಲ್ಪತರು ಇದ್ದಂತೆ. ಇಂಥ ತಂದೆ-ತಾಯಿಯರ ನಿಸ್ವಾರ್ಥ ಪ್ರೀತಿಗೆ ಮಕ್ಕಳು ಕೊಡುವ ಗೌರವ ಇದು ಅಂತ ಸಂಸ್ಥೆಯ ಮುಖ್ಯಸ್ಥರು ಹೇಳುತ್ತಾರೆ.

ಮಕ್ಕಳಿಂದ ಪಾದ ಪೂಜೆ ಮಾಡಿಸಿಕೊಂಡ ಪೋಷಕರ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಹೊಸ ವರ್ಷದ ಮೊದಲ ದಿನ ಈ ರೀತಿ ಮಕ್ಕಳ ಜೊತೆ ಕಳೆದಿರೋದು ತಂದೆ ತಾಯಿಯರಿಗೆ ಸಂತೋಷ ನೀಡಿದೆ.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ, ಸಂಸ್ಥೆಯ ಟ್ರಸ್ಟಿ ಶೋಭಾ ವೆಂಕಟರಮಣ, ಅಧ್ಯಕ್ಷರಾದ ಡಿ.ಆರ್.ನಾಗೇಶ್ ಪಾಲ್ಗೊಂಡಿದ್ದರು. ಅಲ್ಲದೆ ಈ ಕಾರ್ಯಕ್ರಮದ ನೇತೃತ್ವವನ್ನು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿಕೊಂಡಿದ್ದರು. ಹಾಗೆಯೇ ಈ ಶಾಲೆಯಲ್ಲಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದ ವಿದ್ಯಾರ್ಥಿ ಓದುತ್ತಿದ್ದು, ಆ ವಿದ್ಯಾರ್ಥಿಗೆ ಶುಲ್ಕದಲ್ಲಿ ರಿಯಾಯಿತಿಯನ್ನು ಸಂಸ್ಥೆಯವರು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *