ಪ್ರವಾಹದಿಂದ ಕೆಸರುಮಯವಾಗಿದ್ದ ಶಾಲೆಯನ್ನು ಸ್ವಚ್ಛಗೊಳಿಸುತ್ತಿರುವ ಮಕ್ಕಳು

-ಮಕ್ಕಳಿಗೆ ಗ್ರಾಮಸ್ಥರು, ಶಿಕ್ಷಕರು ಸಾಥ್

ಬಾಗಲಕೋಟೆ: ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ್ದ ಪ್ರವಾಹ ಸದ್ಯ ತಗ್ಗಿದ್ದು, ತಮ್ಮ ಶಾಲೆಯ ಮೇಲಿನ ಪ್ರೀತಿಯಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಶಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಉಂಟಾಗಿದ್ದ ಭೀಕರ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಆದರೆ ಈಗ ಕೊಂಚ ಮಟ್ಟದಲ್ಲಿ ಪ್ರವಾಹದ ನೀರು ತಗ್ಗಿದ್ದು, ಅದರಿಂದ ಸೃಷ್ಟಿಯಾಗಿರುವ ಅವಾಂತರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಗೆ ನೀರು ತುಂಬಿ ಕೆಸರುಮಯವಾಗಿತ್ತು. ಹೀಗಾಗಿ ನೀರು ತಗ್ಗಿರುವ ಕಾರಣಕ್ಕೆ ಈ ಶಾಲೆಯ ವಿದ್ಯಾರ್ಥಿಗಳೇ ಶಾಲೆಯ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

ಕಲಿಕೆಯಲ್ಲಿ ಆಸಕ್ತಿ ಇರುವ ಕಾರಣಕ್ಕೆ ತಮ್ಮ ಶಾಲೆಯನ್ನು ತಾವಾಗೆ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳು ನಿರ್ಧರಿಸಿ, ಸ್ನೇಹಿತರೊಟ್ಟಿಗೆ ಸೇರಿಕೊಂಡು ಉತ್ಸಾಹದಿಂದ ಶಾಲೆಯನ್ನು ಸ್ವಚ್ಛ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಆಸಕ್ತಿಗೆ ಮೆಚ್ಚಿದ ಶಿಕ್ಷಕರ ವರ್ಗ ಹಾಗೂ ಎಸ್‍ಡಿಎಂಸಿ ಸದಸ್ಯರು ಕೂಡ ಮಕ್ಕಳಿಗೆ ಸಾಥ್ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈಜೊಡಿಸಿದ್ದಾರೆ.

ಶಾಲಾ ಕೊಠಡಿಗಳಿಗೆ ಹಾಗೂ ಆವರಣಕ್ಕೆ ಪುಟಾಣಿ ಮಕ್ಕಳು ಪೈಪ್‍ಗಳ ಮೂಲಕ ನೀರು ಹಾಕುತ್ತಿದ್ದರೆ, ಇತರೆ ವಿದ್ಯಾರ್ಥಿಗಳು ಪೊರಕೆಯಿಂದ ಗುಡಿಸಿ ಕಸವನ್ನು, ಕೆಸರನ್ನು ಹೊರಗಡೆ ಎಸೆಯುತ್ತಿದ್ದಾರೆ. ಅಲ್ಲದೆ ಮಳೆಗೆ ಶಾಲೆಯ ಕೆಲ ಕೊಠಡಿಗಳ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಅದನ್ನು ಕೂಡ ಮಕ್ಕಳೇ ಸ್ವಚ್ಛಗೊಳಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *