ವಿದ್ಯಾರ್ಥಿನಿ ಮೇಲೆ ಮರ ಬಿದ್ದ ಕೇಸ್- ಘಟನೆ ನಂತರ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು

ಬೆಂಗಳೂರು: ಸಿಲಿಕಾನ್ ಸಿಟಿಯ ರಾಮಮೂರ್ತಿನಗರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಮರಬಿದ್ದ ಪ್ರಕರಣ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಘಟನೆ ನಂತರ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೇ ಇಂದು ಘಟನೆ ನಡೆದ ಜಾಗದಲ್ಲಿ ಒಣಗಿನ ಮರಗಳನ್ನು ತೆರವು ಕಾರ್ಯ ನಡೆಯುತ್ತಿದೆ.

ಗಾಯಗೊಂಡ ಬಾಲಕಿ ತ್ರಿಷಾ ಸ್ಥಿತಿ ಗಂಭೀರವಾಗಿದ್ದು, ಹೆಚ್‍ಎಎಲ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಗೆ ಮೇಯರ್ ಗೌತಮ್ ಕುಮಾರ್ ಜೈನ್, ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಭೇಟಿ ನೀಡಿ ಬಾಲಕಿಯ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಭೇಟಿ ಮಾಡಿದ ನಂತರ ಮಾತಾಡಿದ ಕಮೀಷನರ್ ಅನಿಲ್ ಕುಮಾರ್, ಕಳೆದ ವಾರದಿಂದ ನಮ್ಮ ಅಧಿಕಾರಿಗಳು, ಒಣಗಿದ ಮರಗಳ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಅರಳಿಕಟ್ಟೆ ಇರುವ ಜಾಗದಲ್ಲಿನ ಮರದಲ್ಲೂ ತೆರವು ಮಾಡುವ ವೇಳೆ ಅಲ್ಲಿನ ಸ್ಥಳೀಯರೇ ಇದನ್ನು ವಿರೋಧಿಸಿದ್ದಾರೆ. ಇದು ಅರಳಿಕಟ್ಟೆ ಮರ ಇದನ್ನು ಬಿಟ್ಟು ಬೇರೆ ಮರಗಳಲ್ಲಿನ ಒಣಮರಗಳನ್ನು ಕಟ್ ಮಾಡುವಂತೆ ಸೂಚಿಸಿದ್ದಾರೆ. ಹಾಗಾಗಿ ಆ ಮರದ ಒಣಮರವನ್ನು ಕಟ್ ಮಾಡಿಲ್ಲ. ಈಗ ಅದೇ ಮರದ ಕೊಂಬೆ ಬಿದ್ದು ಘಟನೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಬಾಲಕಿ ತ್ರಿಷಾಳ ಆಸ್ಪತ್ರೆ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ ಎಂದರು.

ಇದೇ ವೇಳೆ ಸ್ಥಳೀಯ ಕಾರ್ಪೋರೇಟರ್ ಪದ್ಮಾವತಿ ವಿದ್ಯಾರ್ಥಿನಿ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಕೊಟ್ಟರು. ಸದ್ಯ ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಐಸಿಯೂನಲ್ಲಿ ಚಿಕಿತ್ಸೆ ನಡೆದಿದೆ. ಬುಧವಾರ ಬೆಳಗ್ಗೆ ಬಾಲಕಿ ತ್ರಿಷಾ ತನ್ನ ತಂದೆ ರಾಜು ಜೊತೆಗೆ ಸ್ಕೂಲ್‍ಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ತ್ರಿಷಾ ಗಂಭೀರವಾಗಿ ಗಾಯಗೊಂಡಿದ್ದಳು.

Comments

Leave a Reply

Your email address will not be published. Required fields are marked *