ಐಪಿಎಲ್ ಫೈನಲ್ ಹೈದರಾಬಾದ್‍ಗೆ ಶಿಫ್ಟ್ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಹಾನಿ

ಹೈದರಾಬಾದ್: ಐಪಿಎಲ್ 2019ನೇ ಆವೃತ್ತಿಯ ಫೈನಲ್ ಪಂದ್ಯವನ್ನು ಆಯೋಜಿಸಲು ಅವಕಾಶ ಪಡೆದ ಬೆನ್ನಲ್ಲೇ ಆಂಧ್ರಪ್ರದೇಶ್ ಕ್ರಿಕೆಟ್ ಸಂಸ್ಥೆಗೆ ಕಹಿ ಅನುಭವ ಆಗಿದ್ದು, ರಭಸದಿಂದ ಬೀಸಿದ ಗಾಳಿಯಿಂದಾಗಿ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಹಾನಿಯಾಗಿದೆ.

ಹೈದರಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಸಂಜೆ ಬೀಸಿದ ಗಾಳಿಯಿಂದ ಕ್ರೀಡಾಂಗಣದಲ್ಲಿ ನೆರಳಿನ ವ್ಯವಸ್ಥೆಗೆ ಹಾಕಿದ್ದ ಶೀಟ್‍ಗಳು ಹಾರಿ ಹೋಗಿದೆ. ಸದ್ಯ ಕ್ರೀಡಾಂಗಣದ ಅಧಿಕಾರಿಗಳಿಗೆ 2 ಸಮಸ್ಯೆಗಳು ಎದುರಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆ ಮುಂದುವರಿಯುವ ಸೂಚನೆ ಸಿಕ್ಕಿದ್ದರಿಂದ ಕ್ರೀಡಾಂಗಣದಲ್ಲಿ ಮತ್ತೆ ಹಾನಿಯಾಗದಂತೆ ತಡೆಯುವುದು ಹಾಗೂ ಹಾನಿಯಾಗಿರುವುದನ್ನು ನಿಗದಿತ ಅವಧಿಯ ಒಳಗಡೆ ಸರಿಪಡಿಸುವ ಕಾರ್ಯ ನಡೆಸಬೇಕಿದೆ.

ಇತ್ತ ಏಪ್ರಿಲ್ 29 ರಂದು ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯ ನಡೆಯಲಿದ್ದು, ಮೇ 12 ರಂದು ಫೈನಲ್ ಪಂದ್ಯ ನಡೆಯಲಿದೆ. ಪರಿಣಾಮ ಕ್ರೀಡಾಂಗಣದ ಅಧಿಕಾರಿಗಳಿಗೆ ಪುನರ್ ವ್ಯವಸ್ತೆ ಕಲ್ಪಿಸಲು ಕಡಿಮೆ ಅವಧಿ ಸಿಕ್ಕಿದೆ.

ಸೋಮವಾರ ಬಿಸಿಸಿಐ ಫೈನಲ್ ಪಂದ್ಯವನ್ನು ಚೆನ್ನೈ ಬದಲಾಗಿ ಹೈದರಾಬಾದ್‍ಗೆ ಶಿಫ್ಟ್ ಮಾಡಿತ್ತು. ಚಿದಂಬರಂ ಸ್ಟೇಡಿಯಂನಲ್ಲಿರುವ ಮೂರು ಕಡೆ ಪ್ರೇಕ್ಷಕರ ಸ್ಟ್ಯಾಂಡ್ ಗಳಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ವಿಫಲವಾಗಿತ್ತು. ಪರಿಣಾಮ ಬಿಸಿಸಿಐ ಅನಿವಾರ್ಯವಾಗಿ ಈ ಬಾರಿ ಫೈನಲ್ ಪಂದ್ಯವನ್ನು ಹೈದರಾಬಾದಿಗೆ ಶಿಫ್ಟ್ ಮಾಡಿತ್ತು.

Comments

Leave a Reply

Your email address will not be published. Required fields are marked *