ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

ಭುವನೇಶ್ವರ್: ತೃತೀಯ ಲಿಂಗಿ ರಾಣಿ ಕಿಣ್ಣರ್ ದೇಶದ ಮೊದಲ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸದ್ಯ ಉಬರ್ ಕಂಪನಿಯ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಧೈರ್ಯವಾಗಿ ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ.

ರಾಣಿ 2016ರಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಆ ಮೂಲಕ ತಮ್ಮ ಜೀವನ ನಡೆಸಿಕೊಳ್ಳಲು ಆರಂಭಿಸಿದ್ದರು. ಆದರೆ ರಾಣಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಯಾರೂ ಅವರ ಆಟೋವನ್ನು ಬಳಸಿಕೊಂಡಿರಲಿಲ್ಲ. ಸಮಾಜದಲ್ಲಿ ತನಗೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡ ರಾಣಿ, ಪುರಿ ಪವಿತ್ರ ರಥ ಯಾತ್ರೆಯ ಸಂದರ್ಭದಲ್ಲಿ ಅಂಬುಲೆನ್ಸ್ ಡ್ರೈವರ್ ಆಗುವ ಮೂಲಕ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.

2016ರಲ್ಲಿ ನಾನು ಆಟೋ ಮೂಲಕ ಚಾಲಕ ವೃತ್ತಿಯನ್ನು ಆರಂಭಿಸಿದೆ. ಆದರೆ ಆ ಕೆಲಸ ನನ್ನ ಕೈ ಹಿಡಿಯಲಿಲ್ಲ. ಯಾಕೆಂದರೆ ಜನರು ನನ್ನ ಆಟೋವನ್ನು ಬಳಸಿಕೊಂಡಿಲ್ಲ. ನಂತರ 2017ರಲ್ಲಿ ಪುರಿ ರಥಯಾತ್ರೆಯ ಸಂದರ್ಭದಲ್ಲಿ ಅಂಬ್ಯುಲೆನ್ಸ್ ನಲ್ಲಿ ಕೆಲಸ ಮಾಡಿದೆ ಎಂದು ರಾಣಿ ತಿಳಿಸಿದ್ದಾರೆ.

ಮಾಜಿ ಕ್ಯಾಬ್ ಚಾಲಕರೊಬ್ಬರು ಉಬರ್ ಕಂಪನಿಗೆ ರಾಣಿಯನ್ನು ಪರಿಚಯ ಮಾಡಿಸಿಕೊಟ್ಟರು. ಅಲ್ಲದೆ ಈ ಮೂಲಕ ತಮ್ಮ ಪಾರ್ಟ್ನರ್  ಆಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು. ಅಂತೆಯೇ ಕಂಪನಿ ನಡೆಸಿದ ಸಂದರ್ಶನದಲ್ಲಿ ಪಾಸಾದ ರಾಣಿ, ನಂತರ ತಾನೇ ಕಾರೊಂದನ್ನು ಖರೀದಿಸಿದರು.

ಸದ್ಯ ರಾಣಿ ಅವರು ಇತರ ತೃತೀಯ ಲಿಂಗಿಗಳಿಗೆ ಮಾದರಿಯಾಗಿ ನಿಂತಿದ್ದಾರೆ. ಕೇವಲ ಬೀದಿಯಲ್ಲಿ ಭಿಕ್ಷೆ ಬೇಡದೇ ಧೈರ್ಯವಾಗಿ ಮುನ್ನುಗ್ಗಿ, ಸಮಾಜದಲ್ಲಿ ತಮಗೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತರೆ ನಾವು ಕೂಡ ಇತರರಂತೆ ಜೀವನ ನಡೆಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ರಾಣಿ ಮೇಡಂ ಅವರನ್ನು ನೋಡಿ, ಆಕೆಯ ಅಭಿಮಾನಿಯಾಗಿದ್ದೇನೆ. ಅಲ್ಲದೆ ನಾನು ಕೂಡ ಓರ್ವ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಮೂಲಕ ನನಗೆ ಅವರು ಸ್ಫೂರ್ತಿಯಾಗಿದ್ದಾರೆ. ಪುರುಷ ಚಾಲಕರಿಗೆ ಹೋಲಿಸಿದರೆ ವಿಶೇಷವಾಗಿ ರಾತ್ರಿ ಹೊತ್ತು ಪ್ರಯಾಣ ಮಾಡುವ ಹುಡುಗಿಯರು ಸುರಕ್ಷತೆಯ ದೃಷ್ಟಿಯಿಂದ ನನ್ನ ಕ್ಯಾಬನ್ನೇ ಆಯ್ಕೆ ಮಾಡುತ್ತಾರೆ ಎಂದು ಒಡಿಶಾದ ಮತ್ತೊಬ್ಬ ತೃತೀಯ ಲಿಂಗಿ ಸ್ನೇಹಶ್ರೀ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *