ಮುಖ್ಯಮಂತ್ರಿ ಕನಸು ಕಾಣೋದು ಬಿಡಿ, ಇರೋ ಸೀಟುಗಳನ್ನು ಉಳಿಸಿಕೊಳ್ಳಿ: ಈಶ್ವರಪ್ಪ

ಶಿವಮೊಗ್ಗ: ನಾನು ಸಿಎಂ ಆದರೆ 10 ಕೆ.ಜಿ ಅಕ್ಕಿ ಕೊಡುತ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರು ಮುಖ್ಯಮಂತ್ರಿ ಕನಸು ಕಾಣೋದು ಬಿಡಿ, ಇರೋ ಸೀಟುಗಳನ್ನು ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅವರೇ ಕೈಗೊಂಡಿರುವ ತೀರ್ಮಾನವೇ. ಈ ಬಗ್ಗೆ ರಾಹುಲ್ ಗಾಂಧಿ, ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿಕೆ ಶಿವಕುಮಾರ್ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಮುಖ್ಯಮಂತ್ರಿ ಕನಸು ಕಾಣೋದು ಬಿಡಿ, ಇರೋ ಸೀಟುಗಳನ್ನು ಉಳಿಸಿಕೊಳ್ಳಿ. ದೇವೇಗೌಡರು, ಸಿದ್ದರಾಮಯ್ಯ, ಜಮೀರ್ ಜಾತಿ- ಧರ್ಮದ ರಾಜಕಾರಣ ಮಾಡಿದ್ದಾರೆ. ಆದರೆ ಈ ಚುನಾವಣೆ ಜಾತಿವಾದ ತಿರಸ್ಕರಿಸಿ, ರಾಷ್ಟ್ರವಾದಕ್ಕೆ ಮನ್ನಣೆ ನೀಡುತ್ತದೆ. ದೇಶ ಕಟ್ಟಲು ನಮ್ಮ ಜೊತೆ ಬನ್ನಿ ಎಂದು ಕರೆ ನೋಡಿದ್ದೇವೆ ಎಂದರು.

ಬಳಿಕ ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಲಿದ್ದಾರೆ. ಬೆಂಗಳೂರಿನಲ್ಲಿ ಮತದಾನ ಪ್ರಮಾಣ ನಿರೀಕ್ಷೆಗಿಂತ ಕಡಿಮೆ ಆಗಿದೆ. ಎಂಪಿ, ಏಳು ಶಾಸಕರು, ಇಬ್ಬರು ಎಂಎಲ್‍ಸಿಗಳು ಸೇರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ ಎಂದರು.

ಬೆಂಗಳೂರು ಹೊರತು ಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾನ ಆಗಿದೆ. 14 ಕ್ಷೇತ್ರಗಳಲ್ಲಿ 10-11 ಸೀಟು ಗೆಲ್ಲಲಿದ್ದೇವೆ. ಪುಲ್ವಾಮಾ ಘಟನೆಯಿಂದ ಇಡೀ ವಿಶ್ವ ಭಾರತದ ಜೊತೆ ಇದೆ. ಆದರೆ ಪಾಕಿಸ್ತಾನ ಒಂಟಿಯಾಗಿದೆ. ಮೈತ್ರಿ ಬಗ್ಗೆ ಆಯಾ ಪಕ್ಷಗಳಲ್ಲೇ ತೀವ್ರ ಒಡಕು ಇದೆ. ಇದು ಜನರಿಗೆ ತಿಳಿದಿದ್ದು, ಬಿಜೆಪಿಗೆ ಲಾಭ ಆಗಲಿದೆ ಎಂದು ಈಶ್ವರಪ್ಪ ಹೇಳಿದರು.

Comments

Leave a Reply

Your email address will not be published. Required fields are marked *